

ಗೋಣಿಕೊಪ್ಪಲು : ಪೊನ್ನಂಪೇಟೆ ತಾಲೂಕಿನ ಬಾಳೆಲೆ ಹೋಬಳಿಯ ಜಾಗಲೆ ಗ್ರಾಮದಲ್ಲಿ ಮೂತ್ರ ವಿಸರ್ಜನೆಗೆಂದು ಮಂಗಳವಾರ ತಡರಾತ್ರಿ ಹೊರಬಂದ ಕಾರ್ಮಿಕನ ಮೇಲೆ ಕರಡಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಮಿಕ ಯರವರ ಕಾಕು ಅವರ ಪುತ್ರ ಕುಳ್ಳ(42) ಗಾಯಗೊಂಡ ಕಾರ್ಮಿಕ. ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದ ಕಾರ್ಮಿಕನನ್ನು ತೋಟದ ಮಾಲೀಕರು ಗೋಣಿಕೊಪ್ಪ ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ವರೂಪದ ಗಾಯದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಯಿತು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಲ್ಲಳ್ಳ ವನ್ಯಜೀವಿ ವಿಭಾಗದ ಅರಣ್ಯ ವಲಯಕ್ಕೆ ಹೊಂದಿಕೊಂಡಿರುವ ಜಾಗಲೆ ಪ್ರದೇಶದಲ್ಲಿ ಕರಡಿ ಕಾಣಿಸಿಕೊಂಡಿತ್ತು. ಈ ವೇಳೆ ಸಮೀಪದ ತೋಟದ ಮಾಲೀಕರ ಲೈನ್ ಮನೆಯಲ್ಲಿದ್ದ ಕಾರ್ಮಿಕ ಕುಳ್ಳ ರಾತ್ರಿ 11 ಗಂಟೆ ಸುಮಾರಿಗೆ ಮೂತ್ರ ವಿಸರ್ಜನೆಗೆಂದು ಹೊರಗೆ ಬಂದಿದ್ದಾರೆ. ಈ ವೇಳೆ ಕರಡಿ ಆತನ ಮೇಲೆ ದಾಳಿ ನಡೆಸಿ ಕಣ್ಣು, ತಲೆ ಹಾಗೂ ಹಣೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯ ಮಾಡಿದೆ.
ಸುದ್ದಿ ತಿಳಿದ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ, ಮೈಸೂರಿನ ಆಸ್ಪತ್ರೆಗೆ ತೆರಳಿ ಕಾರ್ಮಿಕನ ಆರೋಗ್ಯ ವಿಚಾರಿಸಿದರು. ಅಲ್ಲದೆ ಗುಣಮಟ್ಟದ ಚಿಕಿತ್ಸೆ ನೀಡುವಂತೆ ವೈದ್ಯರಲ್ಲಿ ಮನವಿ ಮಾಡಿದರು. ಈಗಾಗಲೇ ಗಾಯಾಳುವಿನ ಸ್ಥಿತಿ ಗಂಭೀರವಾಗಿದ್ದು, ಅಗತ್ಯ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ವೈದ್ಯರು ಮಾಹಿತಿ ನೀಡಿದರು.
ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಸಂಕೇತ್ ಪೂವಯ್ಯ, ದಾಳಿಗೆ ಒಳಗಾದ ಕಾರ್ಮಿಕನಿಗೆ ಪರಿಹಾರ ಒದಗಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಬಾರದು ಎಂದು ನಿರ್ದೇಶನ ನೀಡಿದರು.