

ಸಿದ್ದಾಪುರ: ಸರ್ಕಾರದ ಕಾರ್ಯಕ್ರಮ ಸರಿಯಾಗಿ ಅನುಷ್ಠಾನಕ್ಕೆ ಬರಲು ಸರ್ಕಾರಿ ನೌಕರರ ಪಾತ್ರ ಮಹತ್ವದ್ದಾಗಿದೆ. ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸುವುದು ಮುಖ್ಯ. ಏಳನೇ ವೇತನ ಆಯೋಗದ ಅನುಷ್ಠಾನ ಹಾಗೂ ಹಳೆಯ ಪಿಂಚಣಿ ಯೋಜನೆ ಕುರಿತು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ಪಟ್ಟಣದ ರಾಘವೇಂದ್ರಮಠದ ಸಭಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಶುಕ್ರವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರದ ಪ್ರತಿಯೊಂದು ಕಾರ್ಯಕ್ರಮ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕಾದರೆ ಸರ್ಕಾರಿ ನೌಕರರ ಪಾತ್ರ ಮುಖ್ಯ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಮಸ್ತ ನೌಕರರು ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ರಾಜೇಶ ನಾಯ್ಕ ಸಂಘದ ಉದ್ದೇಶಗಳ ಕುರಿತು ಮಾತನಾಡಿ, ಸರ್ಕಾರಿ ನೌಕರರ ಏಳನೇ ವೇತನ ಆಯೋಗದ ವರದಿ ಅನುಷ್ಠಾನದ ಕುರಿತು ಸರ್ಕಾರದ ಗಮನಕ್ಕೆ ತಂದು ಜಾರಿಗೆ ಪ್ರಯತ್ನಿಸಬೇಕು. ಎನ್‌ಪಿಎಸ್ ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ ಜಾರಿಗೆ ಬರುವಂತೆ ಮಾಡಬೇಕೆಂದು ಶಾಸಕರಿಗೆ ಮನವಿ ಸಲ್ಲಿಸಿದರು.
ತಾಲೂಕು ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಪ್ರಶಾಂತ ಜಿ.ಎಸ್., ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಆರ್. ನಾಯ್ಕ, ಪಿಯು ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜಪ್ಪ ಎಂ.ಜಿ. ಉಪಸ್ಥಿತರಿದ್ದರು.
ಶಾಸಕ ಭೀಮಣ್ಣ ನಾಯ್ಕ, ಬಿಇಒ ಜಿ.ಐ. ನಾಯ್ಕ, ನಿವೃತ್ತ ಸರ್ಕಾರಿ ನೌಕರರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.95ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಗಳಿಸಿದ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತೇಜಸ್ವಿ ನಾಯ್ಕ, ಉಷಾ ನಾಯ್ಕ, ಪರಶುರಾಮ ನಾಯ್ಕ, ನಾಗರಾಜ ಮಡಿವಾಳ ಕಾರ್ಯಕ್ರಮ ನಿರ್ವಹಿಸಿದರು.