

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಕೆಎಲ್ಇ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಪುಣೆಯ ಭಾರತೀಯ ಸೇನೆಯ ವೈದ್ಯಕೀಯ ಕಾಲೇಜಿನ ಡಾ. ಪರಶುರಾಮ ದೀವಾನಂದ ಮಾತನಾಡಿ, ನಿತ್ಯದ ಕಾಯಕಗಳನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಮಾಡುವುದರ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಸೇನೆಯನ್ನು ಸೇರುವುದು ಕೇವಲ ತಾಯ್ನಾಡಿನ ಸೇವೆಗಷ್ಟೇ ಅಲ್ಲದೆ ಅದರಿಂದ ನಮ್ಮ ವೈಯಕ್ತಿಕ ಜೀವನಕ್ಕೂ ಸಾಕಷ್ಟು ಅನುಕೂಲಗಳಿವೆ. ವಿದ್ಯಾರ್ಥಿಗಳು ಪಾಲಕರು ನೀಡುವ ಸ್ವಾತಂತ್ರ್ಯನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದರು.
ಧ್ವಜಾರೋಹಣ ನೆರವೇರಿಸಿದ ಪ್ರಾಚಾರ್ಯ ಡಾ. ಶರದ ಜೋಶಿ, ಕಾಶ್ಮೀರ ಮತ್ತು ಪಂಜಾಬ್ದಲ್ಲಿನ ಸಮಸ್ಯೆಗಳಿಗಿಂತ ಈಶಾನ್ಯ ರಾಜ್ಯಗಳ ಸಮಸ್ಯೆಗಳು ಗಂಭೀರವಾಗಿವೆ. ಅವುಗಳನ್ನು ನಿರ್ಲಕ್ಷಿಸಿದರೆ ಭವಿಷ್ಯದಲ್ಲಿ ದೇಶದ ಸಾರ್ವಭೌಮತೆಗೆ ಧಕ್ಕೆ ಬರುವುದೆಂದು 70ರ ದಶಕದಲ್ಲಿಯೇ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಎಚ್ಚರಿಸಿದ್ದರು ಎಂದು ಹೇಳಿದರು.
ಡೀನ್ ಡಾ. ಮನು ಟಿ. ಎಂ. ಮಾತನಾಡಿದರು. ಸಂಸ್ಥೆಯ ಸಂಗೀತ ವೃಂದದ ಸಂಗಡಿಗರು ದೇಶಭಕ್ತಿ ಗೀತೆ ಪ್ರಸ್ತುತ ಪಡಿಸಿದರು. ಸ್ವಾತಂತ್ರ್ಯ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.