ಸೇವಾ ಮನೋಭಾವದಿಂದ ಕೆಲಸ ಮಾಡಿ

30 vikram 1
Published on

ಧಾರವಾಡ: ಜ್ಞಾನ ಮತ್ತು ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಬದುಕುತ್ತಿರುವ ಬ್ರಾಹ್ಮಣ ಸಮುದಾಯ ಆರ್ಥಿಕವಾಗಿಯೂ ಸಬಲಗೊಳ್ಳಬೇಕು. ಇದಕ್ಕಾಗಿ ಸಮುದಾಯ ಸಂಘಟಿತವಾಗುವ ಅಗತ್ಯವಿದೆ ಎಂದು ಮಹಾನಗರ ಪಾಲಿಕೆ ಮಾಜಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.

ಇಲ್ಲಿನ ನುಗ್ಗಿಕೇರಿ ಹನುಮಂತ ದೇವಸ್ಥಾನ ಆವರಣದ ಸಭಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉತ್ತರ ಕರ್ನಾಟಕ ಬ್ರಾಹ್ಮಣ ಅಡುಗೆ ಮಾಡುವವರು ಮತ್ತು ಸಹಾಯಕರ ಅನ್ನಪೂರ್ಣೆಶ್ವರಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಂದು ವೃತ್ತಿಗೂ ತನ್ನದೆಯಾದ ಘನತೆ, ಗೌರವ ಇದೆ. ಪ್ರಸ್ತುತ ಬ್ರಾಹ್ಮಣ ಸಮುದಾಯದಲ್ಲಿ ಅಡುಗೆ ಮಾಡುವುದನ್ನೇ ವೃತ್ತಿ ಮಾಡಿಕೊಂಡವರು ಹಲವರಿದ್ದಾರೆ. ಆದರೆ ಅವರೆಲ್ಲ ಅಸಂಘಟಿತರಾಗಿದ್ದು, ಕಷ್ಟಪಟ್ಟರೂ ಆರ್ಥಿಕ ಸಬಲತೆ ಪಡೆಯಲು ಸಾಧ್ಯವಾಗುತ್ತಿಲ್ಲ. ಅಡುಗೆ ಮಾಡುವವರು ಸೇವಾ ಮನೋಭಾವದಿಂದ ಕೆಲಸ ಮಾಡಿದರೆ, ಜನರ ಪ್ರೀತಿ ಗಳಿಸಿ ಉದ್ಯೋಗದಲ್ಲಿ ಉನ್ನತಿ ಸಾಧಿಸಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದಮೂರ್ತಿ ಮಾತನಾಡಿ, ಅತ್ಯಂತ ಪ್ರತಿಭಾವಂತರಿರುವ ಬ್ರಾಹ್ಮಣ ಸಮುದಾಯ ಸಂಘಟನೆ ಕೊರತೆಯಿಂದ ತೊಂದರೆ ಅನುಭವಿಸುತ್ತಿದೆ. ಇದೀಗ ಸರ್ಕಾರ ಅಭಿವೃದ್ಧಿ ಮಂಡಳಿ ರಚಿಸಿದೆ. ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮಂಡಳಿ ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಅರ್ಹರು ಸೌಲಭ್ಯಗಳ ಪ್ರಯೋಜನ ಪಡೆಯಬೇಕು ಎಂದರು.

ವೇದಮೂರ್ತಿ ಚಂದ್ರಶೇಖರ ಶಾಸ್ತ್ರಿ, ಬಂಡಾಚಾರ್ಯ ಗಿಡದ ಹುಬ್ಬಳ್ಳಿ, ಪೂರ್ಣಾ ಪಾಟೀಲ, ಅರುಣ ನೀಲೋಪಂತ್, ಸಂಘದ ಅಧ್ಯಕ್ಷ ಅನಿಲ ಬಿಜಾಪುರ, ವೆಂಕಟೇಶ ಉಪಾಧ್ಯೆ, ಗುರುರಾಜ ಕಟ್ಟಿ, ಮನೋಜ ದೇಸಾಯಿ, ಕೃಷ್ಣ ದೇಸಾಯಿ, ಪಿ.ಆರ್.ದೇಸಾಯಿ, ಅನಂತ ಥಿಟೆ, ಗಿರೀಶ ಮಾಲಿಪಾಟೀಲ, ವಾದಿರಾಜ ಪಾಟೀಲ, ಸಂಘದ ಪದಾಧಿಕಾರಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net