

ಭಟ್ಕಳ: ಕಳೆದ ಹಲವು ವರ್ಷಗಳಿಂದ ಪ್ರತಿದಿನ ಸಮಸ್ಯೆ ಎದುರಿಸುತ್ತಿದ್ದ ಜಾಲಿ ಪಟ್ಟಣ ಪಂಚಾಯಿತಿ, ಪುರಸಭೆ, ಹೆಬಳೆ ಪಂಚಾಯಿತಿಯನ್ನು ಸೇರಿಸಿ ನಗರಸಭೆ ಮಾಡಿದರೆ ಇನ್ನೊಂದು ತಂಡ ಮತ್ತಷ್ಟು ಪಂಚಾಯಿತಿ ಸೇರಿಸಬೇಕಿತ್ತು ಎಂದು ಟೀಕೆ ಮಾಡುತ್ತಿದೆ. ಖಂಡಿತ ಸೇರಿಸುತ್ತೇನೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹೆಬಳೆ ಪಂಚಾಯಿತಿಯಲ್ಲಿ ದಿನಬೆಳಗಾದರೆ ಕಸ ವಿಲೇವಾರಿ, ಚರಂಡಿ ಸಮಸ್ಯೆ, ನೀರಿನ ಸಮಸ್ಯೆಗಳು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಎಲ್ಲಿ ಸಮಸ್ಯೆ ಇತ್ತೊ ಅಲ್ಲಿ ಮೊದಲ ಆದ್ಯತೆಯಲ್ಲಿ ನಗರಸಭೆಗೆ ಮೇಲ್ದರ್ಜೆಗೆ ಏರಿಸಿದ್ದೇನೆ ಎಂದರು.
ಪಟ್ಟಣದಲ್ಲಿ ಇರುವ ಎಲ್ಲಾ ಹಾಸ್ಟೆಲ್‌ಗಳಲ್ಲಿ ತಿಂಗಳಿಗೊಮ್ಮೆ ಸಿಸ್‌ಟ್ಯಾಂಕ್‌ಅನ್ನು ಶುದ್ದಿಗೊಳಿಸಬೇಕು. ಅಲ್ಲಿನ ಶಿಕ್ಷಕರಿಗೆ ಅಥವಾ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಟಿಎಚ್‌ಒ ಡಾ. ಸನಾ ಮಾತನಾಡಿ, ತಾಲೂಕಿನಲ್ಲಿ ಕುಷ್ಟರೋಗದ ಪತ್ತೆ ಕಾರ್ಯ ನಡೆಯುತ್ತಿದು 5 ಪ್ರಕರಣಗಳು ಪ್ರಸ್ತುತ ದಾಖಲಾಗಿವೆ. ಹತ್ತು ಪ್ರಕರಣಗಳು ಈಗಾಗಲೆ ಗುಣವಾಗಿದ್ದು, ತಾಯಿ ಮಕ್ಕಳ ಲಸಿಕೆ ಕಾರ್ಯಗಳು ಪ್ರಗತಿಯಲ್ಲಿದೆ ಎಂದರು.
ತಾಲೂಕಾಸ್ಪತ್ರೆ ಆಡಳಿತಾಧಿಕಾರಿ ಡಾ. ಅರುಣ ಕುಮಾರ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾನ್ಸ್‌ಫರ್ಮರ್ ಸಮಸ್ಯೆ ಇದೆ ಎಂದಾಗ ಅದನ್ನು ಕೂಡಲೆ ಸರಿಪಡಿಸಿ ಕೋಡಿ ಎಂದು ಹೆಸ್ಕಾಂ ಎಇಇ ಮಂಜುನಾಥ ನಾಯ್ಕ ಅವರಿಗೆ ಸೂಚನೆ ನೀಡಲಾಯಿತು.
ಪಿಡಿಒ ದೃಢೀಕರಣ ನೀಡಿದರೆ ವಿದ್ಯುತ್ ಸಂಪರ್ಕ ನೀಡುತ್ತಿಲ್ಲ ಎನ್ನುವ ದೂರುಗಳು ಬಂದಿವೆ ಎಂದು ಎಇಇ ಅವರನ್ನು ಕೇಳಿದಾಗ ಸುಪ್ರೀಂ ಕೋರ್ಟ್ ಆದೇಶದಂತೆ ಒಸಿಯನ್ನು ಪಡೆದು ನೀಡಬೇಕಾಗಿದೆ ಎಂದರು. ಅದಕ್ಕೆ ಸಮಾಧಾನಗೊಳ್ಳದ ಸಚಿವರು ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಎನ್ನುತ್ತಿಲ್ಲ. ಆದರೆ, ನೀರು, ವಿದ್ಯುತ್ ಇವೆಲ್ಲಾ ಮೂಲಭೂತ ಅಗತ್ಯಗಳಲ್ಲಿ ಒಂದು. ಆದೇಶ ಉಲ್ಲಂಘನೆಯಾಗದಂತೆ ಮಾನವೀಯತೆಯ ದೃಷ್ಟಿಯಲ್ಲಿ ಹಿಂದಿನಂತೆ ದೃಢೀಕರಣ ಪಡೆದು ನೀಡಿ. ಈ ಕುರಿತು ಸರ್ಕಾರ ಮಟ್ಟದಲ್ಲೂ ಚರ್ಚೆಯಾಗಿದ್ದು ಆದೇಶವೂ ಹೊರಬಿದ್ದಿದೆ ಎಂದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆ ಜಲಜೀವನ ಮಿಷನ್‌ನಲ್ಲಿ 13 ಸ್ಕೀಮ್‌ಗಳು ಪುರ್ತಿಯಾಗಿವೆ ಎಂದು ಸಹಾಯಕ ಇಂಜಿನಿಯರ್ ಉಮೇಶ ಕೆ.,ಹೇಳುತ್ತಿರುವಂತೆ ಆಕ್ರೋಶಗೊಂಡ ಸಚಿವರು ನಿಮ್ಮ ಸ್ಕೀಮ್‌ಗಳು ಪೇಪರಿನಲ್ಲಿ ಆದರೆ ಸಾಲದು ಜನರಿಗೆ ನೀರು ದೊರೆಯಬೇಕು. ಹಲವು ಕಡೆಗಳಲ್ಲಿ ಕೆವಲ ಪೈಪ್ ಮತ್ತು ನಳಗಳನ್ನು ಅಳವಡಿಸಿ ನಕಲಿ ಬಿಲ್ ಮಾಡಲಾಗಿರುವ ಕುರಿತು ದೂರು ಬಂದಿವೆ. ಡಿಸೆಂಬರ್ ಅಂತ್ಯದೊಳಗೆ ಇದೆಲ್ಲವೂ ಸರಿಯಾಗಬೇಕು. ಇಲ್ಲವಾದಲ್ಲಿ ಇಲ್ಲಿಂದ ವರ್ಗಾವಣೆ ಮಾತ್ರವಲ್ಲ ಅದಕ್ಕೂ ಮೀರಿದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕಂದಾಯ ಇಲಾಖೆಯ ಪ್ರಗತಿಯ ಕುರಿತು ತಿಳಿಸುವಾಗ ಎಂಡೋಸಲ್ಫಾನ್ ಪೀಡಿತರಿಗೆ ಕಾರ್ಡ್ ನೀಡಿದರೂ ಮಾಸಾಶನ ನೀಡಿಲ್ಲ ಏಕೆ? ಎಂದು ತಹಸೀಲ್ದಾರ್ ಕಚೇರಿಯ ಸಿಬ್ಬಂದಿಯನ್ನು ಕೇಳಿದಾಗ, ಅದು ತಾಂತ್ರಿಕ ದೋಷದಿಂದ ಪೂರ್ತಿಯಾಗಿಲ್ಲ ಎಂದಾಗ ಸಚಿವರು ಆಕ್ರೋಶಗೊಂಡರು. ತಹಸೀಲ್ದಾರ್‌ಗೆ ನಿಮ್ಮ ಕಚೇರಿಯಲ್ಲಿ ಏಜೆಂಟರ ಹಾವಳಿ ಮೀತಿ ಮೀರುತ್ತಿದೆ. ಹೀಗೆಯೇ ಮುಂದುವರಿದರೆ ಪರಿಸ್ಥಿತಿ ಗಂಭೀರ ಸ್ವರೂಪ ಪಡೆಯುತ್ತದೆ ಎಂದು ಎಚ್ಚರಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದು ತಹಸೀಲ್ದಾರ್ ನಾಗೇಂದ್ರಕೋಳಶೆಟ್ಟಿ ಹೇಳಿದರು.
240ಕೋಟಿ ರೂ. ವೆಚ್ಚದಲ್ಲಿ ಹೊನ್ನಾವರದಿಂದ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಿದ್ದೇನೆ. ಹೊನ್ನಾವರದ ಕಾಸರಕೋಡಿನಿಂದ ಭಟ್ಕಳ ಗೊರಟೆಯವರೆಗೆ ನೀರು ಸರಬರಾಜು ಆಗಲಿದೆ. ಅದಕ್ಕೆ ಮುಖ್ಯವಾದ ಪೈಪುಗಳು ಮಾತ್ರ ಆ ಯೋಜನೆಯದಾದರೆ ಉಳಿದ ಪೈಪ್ ಹಾಗೂ ಟ್ಯಾಂಕ್‌ಗಳು ಜೆಜೆಎಂ ಸ್ಕೀಮ್‌ನದೆ ಉಪಯೋಗಿಸಲಾಗುವುದು. ಹಾಗಾಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ ಎಂದರು.
ಸರ್ಕಾರಿ ಪದವಿ ಕಾಲೇಜ್‌ಗೆ ಬಸ್ ವ್ಯವಸ್ಥೆ, ಹೊನ್ನಾವರಕ್ಕೆ ರಾತ್ರಿ 8 ಗಂಟೆಯವರೆಗೂ ಬಸ್ ಸೌಲಭ್ಯ ಒದಗಿಸಿ ಎಂದರು. ಹೊಸ ಸುಸಜ್ಜಿತ ಮೀನು ಮಾರುಕಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು. ಅಲ್ಲಿಯೂ ನೂತನ ತಂತ್ರಜ್ಞಾನ ಆಧರಿತ 10 ಮಳಿಗೆಗಳನ್ನು ನಿರ್ಮಿಸಿ ಎಂದರು. ವಿವಿಧ ಇಲಾಖೆಗಳ ಕುಂದುಕೊರತೆಯನ್ನು ಆಲಿಸಿದರು.
ಪುರಸಭೆ ಪ್ರ.ಅಧ್ಯಕ್ಷ ಅಲ್ತಫ್ ಖರೂರಿ, ಸಹಾಯಕ ಲೆಕ್ಕಾಧಿಕಾರಿ ರಾಜೇಶ ಮಹಾಲೆ ಇದ್ದರು.