ಮಕ್ಕಳ ಶ್ರೇಯೋಭಿವೃದ್ಧಿಗೆ ಮನಃಪೂರ್ವಕ ಶ್ರಮಿಸಿ

Work wholeheartedly for the meritorious development of children
ವಿಜಯಪುರ ಜಿಪಂ ಸಭಾಂಗಣದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಪ್ರಗತಿ ಪರಿಶೀಲನೆ ಸಭೆ ನಡೆಸಿದರು. ಜಿಪಂ ಸಿಇಒ ರಾಹುಲ್ ಶಿಂಧೆ, ಶಂಕರ ಮಾರಿಹಾಳ ಮತ್ತಿತರರಿದ್ದಾರೆ.
Published on

ವಿಜಯಪುರ: ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಪ್ರಾಥಮಿಕ ಹಂತದಲ್ಲಿಯೇ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಮನಃ ಪೂರ್ವಕವಾಗಿ ಶ್ರಮಿಸಬೇಕೆಂದು ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಮಾಜಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.
ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಬಾಲ್ಯಾವಸ್ಥೆಯ ವಿಕಸನ, ಹದಿ ಹರೆಯದ ಪರಿಣಾಮಗಳು, ಕಿರುಕುಳ ಬಗ್ಗೆ ತಿಳಿವಳಿಕೆ ಮೂಡಿಸಬೇಕು.

ಮಕ್ಕಳ ಹಕ್ಕುಗಳ ಕ್ಲಬ್, ರಸ್ತೆ ಸುರಕ್ಷತಾ ನಿಯಮ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಪ್ರತಿ ತಿಂಗಳಿಗೊಮ್ಮೆ ಪಾಲಕರ ಸಭೆ ಕರೆದು, ತಮ್ಮ ಮಕ್ಕಳ ಬೆಳವಣಿಗೆ, ಗುಣಮಟ್ಟದ ವಿದ್ಯಾಭ್ಯಾಸ, ಕಲಿಕೆ ಸ್ಥಿತಿಗತಿ ಶಿಕ್ಷಕರ ನ್ಯೂನತೆಗಳಿದ್ದರೆ ಅವುಗಳ ನಿವಾರಣೆ ಕುರಿತು ಸಮಾಲೋಚನೆ ನಡೆಸಬೇಕು. ಮಕ್ಕಳಿಗೆ ಬಿಸಿಯೂಟ, ವಾರದಲ್ಲಿ ಒಂದು ದಿನ ಮೊಟ್ಟೆ ಒದಗಿಸುವುದು, ಮೊಟ್ಟೆ ತಿನ್ನದ ವಿದ್ಯಾರ್ಥಿಗಳಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣು ವಿತರಿಸುವುದು ಸಮರ್ಪಕವಾಗಿ ನಡೆಯಬೇಕು. ಎಲ್ಲ ವಸತಿ ಶಾಲೆಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಕ್ರಮ ವಹಿಸಬೇಕು ಎಂದು ಹೇಳಿದರು.

ಭೂತನಾಳ ವಸತಿ ನಿಲಯ ಅವ್ಯವಸ್ಥೆ

ಭೂತನಾಳ ವಸತಿ ಶಾಲೆಯಲ್ಲಿ 200 ವಿದ್ಯಾರ್ಥಿಗಳಿದ್ದು, ಸ್ನಾನದ ಉಪಯೋಗಕ್ಕಾಗಿ ಎರಡು ನಳ ಮಾತ್ರ ಇದೆ. ಇನ್ನಷ್ಟು ನಳ ಅಳವಡಿಸಬೇಕು. ಅಲ್ಲಿನ ಮೇಲ್ಛಾವಣಿಯಲ್ಲಿ ಅಳವಡಿಸಿದ ಸೋಲಾರ ಕಾರ್ಯನಿರ್ವಹಿಸದೇ ಇರುವುದು ಕೂಡ ಕಂಡು ಬಂದಿದೆ. ಶೌಚಗೃಹ ಸಮರ್ಪಕವಾಗಿಲ್ಲ. ಹೀಗಾಗಿ ಗಮನ ಹರಿಸಬೇಕು. ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ನೀಡಬೇಕು. ಅನಧಿಕೃತ ವಿದ್ಯಾರ್ಥಿಗಳು ಕಂಡು ಬಂದಲ್ಲಿ ಕ್ರಮ ಕೈಗೊಳ್ಳುವುದಾಗಿ ಸೂಚಿಸಿದರು.

ಬಸವನಬಾಗೇವಾಡಿ ತಾಲೂಕಿನ ಕೊಲ್ಹಾರದಲ್ಲಿ ವಸತಿ ಶಾಲೆ ಪರಿಶೀಲಿಸಲಾಗಿ ಸಮಸ್ಯೆ ಕಂಡು ಬಂದಿದೆ. ಟಕ್ಕಳಕಿ ವಸತಿ ಶಾಲೆಯಲ್ಲೂ ಸಮಸ್ಯೆ ಕಂಡು ಬಂದಿದೆ. ಕೂಡಲೇ ಗಮನ ಹರಿಸಬೇಕು. ಕ್ರೀಡಾ ವಸತಿ ಶಾಲೆಯ ಕ್ರೀಡಾಪಟುಗಳಿಗೆ ನಿಯಮದ ಪ್ರಕಾರ ಪೌಷ್ಟಿಕ ಆಹಾರ ಒದಗಿಸುವಂತೆ ಸೂಚಿಸಿದರು.

ಆಸ್ಪತ್ರೆಗಳಲ್ಲಿ ಸಮಸ್ಯೆ

ನಗರದಲ್ಲಿರುವ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ವಿದ್ಯುತ್ ಸಮಸ್ಯೆ ಕಂಡು ಬಂದಿದೆ. ಇದರಿಂದ ಮಕ್ಕಳು- ತಾಯಂದಿರಿಗೆ ತೊಂದರೆಯಾಗದಂತೆ ತ್ವರಿತಗತಿಯಲ್ಲಿ ಕ್ರಮವಹಿಸಬೇಕು. ನಿಲುಗಡೆಗೆ ಕಾರಣ ಕಂಡುಕೊಳ್ಳಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.ಈ ಕುರಿತು ಮುಂದಿನ ಸಭೆಯಲ್ಲಿ ಸಂಪೂರ್ಣ ಮಾಹಿತಿ ಒದಗಿಸುವಂತೆ ಸೂಚಿಸಿದರು.

ಪೋಕ್ಸೊ ಕಾಯ್ದೆಯಡಿ ದಾಖಲಾಗುವ ದೂರುಗಳನ್ನು ಆಧಾರ್‌ಕಾರ್ಡ್‌ನಲ್ಲಿರುವ ಜನ್ಮ ದಿನಾಂಕವನ್ನು ಪರಿಗಣಿಸದೇ ಸುಪ್ರಿಂ ಕೋರ್ಟ್ ಆದೇಶದ ಕಾರಣ, ಶಾಲಾ ದಾಖಲಾತಿ ಇಲ್ಲವೆ ಜನ್ಮ ದಿನಾಂಕವನ್ನು ಪರಿಗಣೆಗೆ ತೆಗೆದುಕೊಂಡು ದೂರು ದಾಖಲಿಸಲು ಸೂಚಿಸಿದರು.
ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಎಲ್. ಲಕ್ಕಣ್ಣವರ ಸಭೆಗೆ ಮಾಹಿತಿ ನೀಡಿ, ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ 0-5 ವರ್ಷದೊಳಗಿನ ಮಕ್ಕಳಿಗೆ ಹಾಗೂ ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗೆ ಆರೋಗ್ಯ ಹಿತದೃಷ್ಟಿಯಿಂದ ಈ ಯೋಜನೆಯಡಿ ಬರುವ ಎಲ್ಲ ತರಹದ ರೋಗಗಳನ್ನು ಗುಣಪಡಿಸಲು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆಗಳಲ್ಲಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಮಕ್ಕಳಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿದ್ದು ಪೂರ್ಣ ಪ್ರಮಾಣ ಗುಣಮುಖರಾಗುವವರೆಗೂ ಉಚಿತವಾಗಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಜಿಪಂ ಸಿಇಒ ರಾಹುಲ್ ಶಿಂಧೆ ಮಾತನಾಡಿ, ಜಿಲ್ಲೆಯ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗಾಗಿ ಚೇತನ ಸಂಜೆ ಕಾರ್ಯಕ್ರಮ ನಡಸಲಾಗುತ್ತಿದ್ದು ಇಲ್ಲಿ ನುರಿತ ಸರ್ಕಾರಿ ಶಿಕ್ಷಕರಿಂದ ಗಣಿತ, ವಿಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳ ಕುರಿತು ವಿಶೇಷವಾಗಿ ಬೋಧನೆ ಹಾಗೂ ಈ ವಿಷಯಗಳ ಕುರಿತು ಸಾಧಕರನ್ನು ಆಹ್ವಾನಿಸಿ ಅವರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿರುವ ಕ್ರೀಡಾ ವಸತಿ ಶಾಲೆಯಲ್ಲಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್ ಕ್ರೀಡಾಪಟುಗಳು ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಭಾಜನರಾಗಿ ಜಿಲ್ಲೆಯ ಕೀರ್ತಿ ಹೆಚ್ಚಿಸಿದ್ದಾರೆ. ಇನ್ನಷ್ಟು ಪ್ರೋತ್ಸಾಹಿಸಲು ಸೂಕ್ತ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ವಸತಿ ನಿಲಯದ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಎಲ್ಲ ವಸತಿ ಶಾಲೆಗಳಿಗೂ ಸ್ವಚ್ಚತೆ, ಶುದ್ಧ ಕುಡಿಯುವ ನೀರು, ಶುಚಿತ್ವ ಕಾಪಾಡುವುದು, ಪೌಷ್ಟಿಕ ಆಹಾರ ನೀಡುವುದು ನಮ್ಮ ಪ್ರಥಮ ಆದ್ಯತೆಯಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಸ್‌ಎಲ್‌ಸಿಯಲ್ಲಿ ಉನ್ನತ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳಿಗೆ ಬೆಂಗಳೂರು ಪ್ರವಾಸ ಏರ್ಪಡಿಸಿ ಐಎಎಸ್ ಅಧಿಕಾರಿಗಳೊಂದಿಗೆ ಭೇಟಿ ಮಾಡಿಸಿ ಉನ್ನತ ವ್ಯಾಸಂಗಕ್ಕೆ ಅನುಕೂಲವಾಗುವಂತೆ ಅವರಿಂದ ಸಲಹೆ ಸೂಚನೆಗಳನ್ನು ಪಡೆಯಲು ಏರ್ಪಾಡು ಮಾಡಿ ಶೈಕ್ಷಣಿಕ ಪ್ರವಾಸ ಏರ್ಪಡಿಸಿರುವುದನ್ನು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಸಂತೋಷ ಕುಂದರ ಮಾತನಾಡಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಶಂಕರ ಮಾರಿಹಾಳ, ವಿಜಯಪುರದ ಉಪ ವಿಭಾಗಾಧಿಕಾರಿ ಬಸವಣ್ಣೆಪ್ಪಾ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ, ನ್ಯಾಯವಾದಿ ಕುಲಕರ್ಣಿ, ಡಿವೈಎಸ್‌ಪಿ ಸಿದ್ಧೇಶ್ವರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ಕೆ. ಚವಾಣ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net