ಖಾತ್ರಿ ಕಾಮಗಾರಿಗಳ ಪರಿಶೀಲನೆಗೆ ತಂಡ ರಚಿಸಿ

25SND-01
Published on

ಸಿಂಧನೂರು: ತಾಲೂಕಿನ ಗ್ರಾಮೀಣ ಭಾಗದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಜಾರಿ, ಮೂಲ ಸೌಕರ್ಯ ಕಲ್ಪಿಸುವುದು ಸೇರಿ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ತಾಲೂಕು ಸಮಿತಿಯಿಂದ ಸೋಮವಾರ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಗ್ರಾಮವಾರು ಸರ್ವೇ ನಡೆಸಿ ಮನೆ, ನಿವೇಶನ ಇಲ್ಲದವರಿಗೆ ಮನೆ-ನಿವೇಶನ ಸೌಲಭ್ಯ ಒದಗಿಸಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ನಿರುದ್ಯೋಗಿಗಳಿಗೆ 200 ದಿನ ಕೆಲಸದ ಜತೆಗೆ 600 ರೂ. ಕೂಲಿ ನೀಡಬೇಕು. ಅಲಬನೂರು ಗ್ರಾಮ ಪಂಚಾಯಿತಿಯ ಬೆಳಗುರ್ಕಿ ಗ್ರಾಮದ ಸರ್ವೇ ನಂ.140 ರಲ್ಲಿ 30 ವರ್ಷಗಳಿಂದ ವಾಸ ಮಾಡುತ್ತಿರುವ ಜನರಿಗೆ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಲಾಯಿತು.

ಅಲಬನೂರು, ಹೊಸಳ್ಳಿ ಇ.ಜೆ., ಕಲಮಂಗಿ, ಬೂತಲದಿನ್ನಿ, ಧಡೇಸುಗೂರು, ವೀರಾಪುರ, ಉಮಲೂಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳ ಪರಿಶೀಲನೆಗೆ ವಿಶೇಷ ತಂಡ ರಚಿಸಬೇಕು. ವಿರುಪಾಪುರ ಗ್ರಾಪಂನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಬಾಕಿ ಕೂಲಿ ಪಾವತಿಸಬೇಕು ಎಂದು ಒತ್ತಾಯಿಸಲಾಯಿತು.

ದನದ ಶೆಡ್ ನಿರ್ಮಾಣಕ್ಕಾಗಿ ಗ್ರಾ.ಪಂ.ಗೆ ಫಲಾನುಭವಿಗಳು ಅರ್ಜಿ ಸಲ್ಲಿಸಿದ್ದು ಇದುವರೆಗೂ ಫಲಾನುಭವಿಗಳನ್ನು ಆಯ್ಕೆ ಮಾಡಿಲ್ಲ. ಕೂಡಲೇ ಫಲಾನುಭವಿಗಳನ್ನು ಆಯ್ಕೆ ಮಾಡಿ ಸಹಾಯ ಧನ ಒದಗಿಸಬೇಕು ಎಂದು ಆಗ್ರಹಿಸಲಾಯಿತು. ಪ್ರಮುಖರಾದ ಪಂಪಾಪತಿ ಬೆಳಗುರ್ಕಿ, ಮಹಾದೇವ ಅಮರಾಪುರ, ವಡ್ಡಮ್ಮ ಬೆಳಗುರ್ಕಿ, ಫಕೀರಮ್ಮ ಬೆಳಗುರ್ಕಿ, ಯಂಕಮ್ಮ ಬೆಳಗುರ್ಕಿ, ಭೀಮಮ್ಮ ಬೆಳಗುರ್ಕಿ, ರಾಮಣ್ಣ, ಹುಲ್ಲೇಶ ವಿರುಪಾಪುರ, ಬಸವರಾಜ ರೈತನಗರಕ್ಯಾಂಪ್, ಕಂಠೆಪ್ಪ, ನಾಗರಾಜ ಭೋವಿ, ಮೌನೇಶ, ರೇಣಪ್ಪ, ಹುಸೇನಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net