

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕಳೆದ 2024 ನೇ ಸಾಲಿನ ಏ.1 ರಿಂದ ಪ್ರಸಕ್ತ ಸಾಲಿನ ಮಾ.31 ರವರೆಗೆ 39 ಬಾಲ ಕಾರ್ಮಿಕರು ಪತ್ತೆಯಾಗಿದ್ದಾರೆ.
ಸಾಮಾಜಿಕ ಪಿಡುಗನ್ನು ನಿಯಂತ್ರಿಸುವ ಉದ್ದೇಶದಿಂದ ಬಾಲಕಾರ್ಮಿಕರು ಹಾಗೂ ಕಿಶೋರಕಾರ್ಮಿಕರ ಪತ್ತೆ ಹಾಗೂ ಪುನರ್ವಸತಿ ಪ್ರಕ್ರಿಯೆಯನ್ನು ನಿರಂತರವಾಗಿ ಕೈಗೊಳ್ಳಲಾಗುತ್ತಿದೆ. ವ್ಯಾಪಕ ಜಾಗೃತಿ ಕಾರ್ಯಕ್ರಮಗಳ ನಡುವೆಯೂ ನಿಯಮ ಉಲ್ಲಂಘನೆಯ ಪ್ರಕರಣಗಳು ವರದಿಯಾಗುತ್ತಿವೆ. ಇದಕ್ಕೆ ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರಲು ಜಿಲ್ಲಾಡಳಿತವು ಕಾಯೋರ್ನ್ಮುಖವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ನೇತೃತ್ವದಲ್ಲಿ ಮಂಗಳವಾರ ಕೈಗೊಂಡಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆ ಮತ್ತು ಜಿಲ್ಲಾ ಟಾಸ್ಕ್ ಫೋರ್ಸ್ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದೆ.
ಜಿಲ್ಲಾದ್ಯಂತ ನಿರಂತರವಾಗಿ ತಪಾಸಣೆ ಕಾರ್ಯಾಚರಣೆ ಕೈಗೊಳ್ಳಬೇಕು. ಪತ್ತೆಯಾದ ಬಾಲ ಕಾರ್ಮಿಕರಿಗೆ ಸರ್ಕಾರದ ವತಿಯಿಂದ ಪುನರ್ವಸತಿ ಕಲ್ಪಿಸುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಡಿಸಿ ಸೂಚಿಸಿದ್ದಾರೆ.
ಬಾಲ ಕಾರ್ಮಿಕತೆ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ನು ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುವ ಇಲಾಖೆಯ ಅಧಿಕಾರಿಗಳು ದಾಳಿಗಳಿಗೆ ಇಲಾಖೆಯ ವಾಹನಗಳನ್ನು ಬಳಸಿಕೊಳ್ಳಬಹುದು. ಹಾಗೆಯೇ ಸುರಕ್ಷತಾ ಕ್ರಮವಾಗಿ ಪೊಲೀಸ್ ರಕ್ಷಣೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಜಿ.ಪಂ.ಸಿಇಒ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶಬಾನಾ ಅಜ್ಜಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಅರ್.ಕೆ ವೆಂಕಟೇಗೌಡ, ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮುನಿಕೆಂಪೆಗೌಡ, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಸ್ ಬೋಜಣ್ಣ ಮತ್ತಿತರರು ಇದ್ದರು.
*ಸಹಾಯವಾಣಿ ನೆರವು
ಬಾಲ ಕಾರ್ಮಿಕ ಕೃತ್ಯಗಳು ಕಂಡು ಬಂದ ತಕ್ಷಣ ಸಂಬಂಧಪಟ್ಟ ಕಾರ್ಮಿಕ, ಪೊಲೀಸ್ ಇಲಾಖೆಗೆ ದೂರು ನೀಡಬಹುದು. ಮಕ್ಕಳ ಸಹಾಯವಾಣಿ 1098 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಉಚಿತ ಮತ್ತು ಕಡ್ಡಾಯ ಶಿಕ್ಷಣ ಪ್ರತಿ ಮಗುವಿನ ಹಕ್ಕು. ಇದರಿಂದ ಯಾರನ್ನೂ ವಂಚಿತರನ್ನಾಗಿಸಬಾರದು. ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಫಿೇಧ ಮತ್ತು ನಿಯಂತ್ರಣ) ಕಾಯ್ದೆ, 1986ರಂತೆ ಉದ್ಯೋಗ ಮತ್ತು ಕೆಲಸ ಪ್ರಕ್ರಿಯೆಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೆಲಸಕ್ಕೆ ನಿಯೋಜಿಸಿಕೊಳ್ಳುವುದು ಹಾಗೂ 18 ವರ್ಷದೊಳಗಿನ ಕಿಶೋರರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ 6 ತಿಂಗಳಿಂದ 2 ವರ್ಫಿಗಳವರೆಗೆ ಜೈಲು ಶಿಕ್ಷೆ ಇಲ್ಲವೇ 20 ಸಾವಿರ ರೂಗಳಿಂದ 50 ಸಾವಿರ ರೂಗಳವರೆಗೆ ದಂಡ ಇಲ್ಲವೇ ಎರಡು ಶಿಕ್ಷೆಗಳನ್ನು ವಿಧಿಸಬಹುದು. ಬಾಲಕಾರ್ಮಿಕ ಪದ್ಧತಿಯನ್ನು ಪ್ರೋತ್ಸಾಹಿಸುವ ಪಾಲಕರಿಗೂ ಶಿಕ್ಷೆ ವಿಧಿಸಬಹುದು. ತಪ್ಪಿತಸ್ಥರು ಪ್ರತಿ ಮಗುವಿಗೆ 20 ಸಾವಿರ ರೂಗಳನ್ನು ಮಕ್ಕಳ ಪುನರ್ವಸತಿಗೆ ರಚಿಸಲಾದ ಕಲ್ಯಾಣ ನಿಧಿಗೆ ಪಾವತಿಸಬೇಕು ಎಂದು ತಿಳಿಸಿದೆ.