ಜೀತಪದ್ಧತಿ ನಿರ್ಮೂಲನೆಗೆ ಶ್ರಮಿಸಿ : ಹಿರಿಯ ಸಿವಿಲ್ ನ್ಯಾಯಾಧೀಶರಾದ ದಿನೇಶ್ ಕರೆ

abolition of serfdom
Published on

ಮೈಸೂರು: ಜೀತ ಪದ್ಧತಿಯ ನಿರ್ಮೂಲನಾ ಕಾಯ್ದೆ ಜಾರಿಯಲ್ಲಿದ್ದರೂ, ಹಲವಾರು ಕ್ಷೇತ್ರಗಳಲ್ಲಿ ಬಲವಂತದ ಜೀತ ಪದ್ಧತಿಯು ಈಗಲೂ ಕಂಡುಬರುತ್ತಿದೆ. ಇದಕ್ಕೆ ಕಾನೂನಿನಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ದಿನೇಶ್ ಹೇಳಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಜೀತ ಪದ್ದತಿ ನಿರ್ಮೂಲನೆ ದಿನದ ಅಂಗವಾಗಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಜೀತ ಪದ್ಧತಿ ನಿಷೇಧ ಕುರಿತು ಅಧಿಕಾರಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರವು ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ಒಟ್ಟು 50 ಅಧಿಕಾರಿಗಳನ್ನು ಜೀತ ಪದ್ಧತಿಯ ನಿರ್ಮೂಲನಾ ಅಧಿಕಾರಿಗಳನ್ನಾಗಿ ನೇಮಿಸಿದೆ. ಪ್ರಮುಖವಾಗಿ ಎಲ್ಲ ಇಲಾಖೆಗಳ ಮುಖ್ಯಸ್ಥರು ಮತ್ತು ಅಧಿಕಾರಿಗಳು ಜೀತ ಪದ್ಧತಿಯ ಕಾರ್ಮಿಕರು ಕಂಡು ಬಂದಲ್ಲಿ ಅವರ ರಕ್ಷಣೆ ಮಾಡುವುದು ಮತ್ತು ಪುರ್ನವಸತಿ ಒದಗಿಸಿಕೊಡುವುದು ಅವರ ಕರ್ತವ್ಯವಾಗಿದೆ ಎಂದರು.

ಜೀತಪದ್ಧತಿಯ ತಡೆಗಟ್ಟುವಿಕೆಗೆ ಹೆಚ್ಚಿನ ಒತ್ತು ನೀಡಬೇಕು. ಕಾನೂನು ವ್ಯಾಪ್ತಿಯಲ್ಲಿ ಏನೇನು ಕ್ರಮವಹಿಸಬೇಕೆಂಬುದರ ಬಗ್ಗೆ ವಿಷಯವನ್ನು ತಜ್ಞರು ಕಾರ್ಯಾಗಾರದಲ್ಲಿ ತಿಳಿಸಿಕೊಡಲಿದ್ದು, ಅದರನ್ವಯ ಜೀತ ಪದ್ಧತಿ ನಿರ್ಮೂಲನೆ ಎಲ್ಲರೂ ಕೈಜೋಡಿಸಿ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ಯುಕೇಶ್ ಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲೂ ಕೂಡ ಜೀತಪದ್ಧತಿಯು ಚಾಲ್ತಿಯಲ್ಲಿರುವುದು ಅತ್ಯಂತ ವಿಷಾದನೀಯ. ಇದು ಸೂಕ್ಷ್ಮ ವಿಚಾರವಾಗಿದ್ದು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿಯ ಎಲ್ಲ ಅಧಿಕಾರಿಗಳು ಒಗ್ಗಟ್ಟಾಗಿ ಜೀತಪದ್ಧತಿ ನಿರ್ಮೂಲನೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸರ್ಕಾರದಿಂದ ಜೀತಪದ್ಧತಿ ನಿರ್ಮೂಲನೆಗೆ ನಿಗದಿಪಡಿಸಿರುವ ಎಸ್‌ಒಪಿಯಂತೆ ಮತ್ತು ಸರ್ಕಾರದ ಆದೇಶದಂತೆ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡಬೇಕಾಗಿರುತ್ತದೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿಯು ಮೇಲ್ವಿಚಾರಣೆ ಮಾಡುತ್ತದೆ. ಜೀವಿಕಾ ಸಂಸ್ಥೆಯು ಕೈಜೊಡಿಸಿ ಜೀತಪದ್ಧತಿ ನಿರ್ಮೂಲನೆ ಕುರಿತು ಸರ್ಕಾರದ ಗಮನಕ್ಕೆ ತರುತ್ತಿದ್ದು, ಎಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.

ಎಚ್.ಡಿ. ಕೋಟೆ ತಾಲೂಕಿನ ಜೀವಿಕ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಬಸವರಾಜು ಜೀತಪದ್ಧತಿ ನಿರ್ಮೂಲನೆ ಕುರಿತು ಮಾತನಾಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿಗಳಾದ ಬಿ.ಎಂ. ಸವಿತಾ, ಡಾ.ಎಂ.ಕೃಷ್ಣರಾಜು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net