

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರೀಯ ಐಕ್ಯತೆ ಹಾಗೂ ಸಮಗ್ರತೆ ಕಾಪಾಡಲು ನಾವೆಲ್ಲರೂ ಒಟ್ಟಾಗಿ ಶ್ರಮಿಸಬೇಕಿದೆ. ಎಲ್ಲರ ಅಭ್ಯುದಯದಲ್ಲಿ ನಮ್ಮ ಅಭ್ಯುದಯ ಕಾಣಬೇಕು. ಅದಕ್ಕಾಗಿ ನಮ್ಮಲ್ಲಿ ನಮ್ಮ ದೇಶದ ಸಂಸ್ಕೃತಿಯ ಅರಿವು ಇರಬೇಕು. ದೆಶದ ನೆಲ, ಜಲ, ಫಲಗಳ ಬಗ್ಗೆ ಹೆಮ್ಮೆಯೂ ನಮ್ಮೊಳಗೆ ಒಡಮೂಡಬೇಕು ಎಂದು ಸ್ವಾಮಿ ವಿವೇಕಾನಂದ ಯೂಥ್ ಮೂವಮೆಂಟ್ ಹಿರಿಯ ವ್ಯವಸ್ಥಾಪಕ ಡಾ. ಮೋಹನಕುಮಾರ ಥಂಬದ ಹೇಳಿದರು.
ನಗರದ ದಿ ಕ್ಲಾಸಿಕ್ ಕೆಎಎಸ್ ಸ್ಟಡಿ ಸರ್ಕಲ್, ನಾಗಪುರದ ದಕ್ಷಿಣ ಮಧ್ಯ ಸಾಂಸ್ಕೃತಿಕ ಕೇಂದ್ರ ಹಾಗೂ ಭೂಮಿ ಪ್ರತಿಷ್ಠಾನ ವತಿಯಿಂದ ಸ್ಟಡಿ ಸರ್ಕಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ‘ನನ್ನ ಮಣ್ಣು ನನ್ನ ದೇಶ’ ಅಭಿಯಾನ ಅಮೃತ ಕಳಶ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಡಾ. ಶಿವಾನಂದ ಟವಳಿ ಮಾತನಾಡಿ, ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮವು ಅಮೃತ ಕಾಲದಲ್ಲಿ ದೇಶದ ಹಿರಿಮೆ, ಗರಿಮೆ ಬಗ್ಗೆ ಹೆಚ್ಚು ದೇಶಾಭಿಮಾನ ಬೆಳೆಸಲು ಉದ್ದೇಶಿತ ಅಭಿಯಾನವಾಗಿದ್ದು, ಇದು ರಾಷ್ಟ್ರವ್ಯಾಪಿ ನಡೆಯುತ್ತಿದೆ. ದೆಹಲಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಂದ ಬಂದಿರುವ ಕಳಸಗಳನ್ನು ದೆಹಲಿಯ ಕರ್ತವ್ಯಪಥದಲ್ಲಿ ಹುತಾತ್ಮರ ಗೌರವಾರ್ಥ ನಿರ್ಮಿಸಲಿರುವ ಅಮೃತ ಉದ್ಯಾನಕ್ಕೆ ತಲುಪಿಸಲಾಗುವುದು ಎಂದರು.
ಅಶೋಕ ಕೋರಿ, ಡಾ. ರಾಜೇಶ ಚಿಟಗುಪ್ಪಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ವೈವಿಧ್ಯತೆಯ ಇಂತಹ ಆಚರಣೆ ವಾಸ್ತವವಾಗಿ ವೈವಿಧ್ಯತೆ ಮೂಡಿಸುವ ಹಬ್ಬವಾಗಿದೆ. ಅದು ನಮ್ಮ ಹೃದಯಗಳಲ್ಲಿ ಏಕತೆಯ ಮನೋಭಾವ ಬೆಸೆಯುತ್ತಿದೆ. ಭಾರತೀಯರಾದ ನಾವು ನಮ್ಮ ವಿಭಿನ್ನ ಜೀವನ ಕ್ರಮ ಮತ್ತು ಪರಂಪರೆ ಗೌರವಿಸಬೇಕು. ಹೀಗಾಗಿ ಸೌಹಾರ್ದ ಮನೋಭಾವ ಮತ್ತು ಸಹೋದರತ್ವ ಮತ್ತಷ್ಟು ಬೆಳೆಯುತ್ತದೆ ಎಂದರು.
ವಿದ್ಯಾರ್ಥಿಗಳಿಗೆ ಪಂಚಪ್ರಾಣ ಪ್ರತಿಜ್ಞೆ ಬೋಧಿಸಲಾಯಿತು. ಸುಜಾತಾ ಸ್ವಾಗತಿಸಿದರು. ಬಸವರಾಜ ಕುಪ್ಪಸಗೌಡರ ನಿರೂಪಿಸಿದರು. ದೀಪಕ ಜೋಡಂಗಿ ವಂದಿಸಿದರು.