

ಬೇಲೂರು: ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ಕುರಿತು ವಿರೋಧ ಹೇಳಿಕೆ ನೀಡುವ ಮೂಲಕ ನಮ್ಮ ಸಂಸ್ಕೃತಿಯನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಸಕ ಶ್ರೀವತ್ಸ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಕೋಟೆ ಶ್ರೀ ಶೃಂಗೇರಿ ಶಾರದಾ ಪೀಠ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿಕಾಸ ಬೇಲೂರು ಹಬ್ಬ ಕಾರ್ಯಕ್ರಮದಲ್ಲಿ ಮಂಜುನಾಥ ಸೀತಾರಾಮ ಶಾಸ್ತ್ರಿ ಅವರ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತ್ತೀಚೆಗೆ ಹಿಂದು ಮತ್ತು ಬ್ರಾಹ್ಮಣ ಸಮಾಜವನ್ನು ತೆಗಳುವ ಪ್ರವೃತ್ತಿ ಹೆಚ್ಚಾಗಿದೆ. ದಸರಾ ಮಾಡಬೇಕೆಂದರೆ ಮಹಿಷ ದಸರಾ ಮಾಡಬೇಕು ಎನ್ನುತ್ತಾರೆ. ಸನಾತನ ಧರ್ಮ ಮತ್ತು ಬ್ರಾಹ್ಮಣರ ಕುರಿತು ಡಿಎಂಕೆ ನಾಯಕ ಸ್ಟಾಲಿನ್, ಅವರ ಮಗ ಉದಯ ನಿಧಿ ಬೇಕಾಬಿಟ್ಟಿ ಹೇಳಿಕೆ ನೀಡಿ ನಿಂದಿಸುತ್ತ್ತಿದ್ದಾರೆ. ಈ ನಡುವೆ ಮೈಸೂರಿನಲ್ಲಿ ಭಗವಾನ್ ಎಂದು ಹೆಸರಿಟ್ಟುಕೊಂಡಿರುವ ಸಮಾಜ ಚಿಂತಕ ಬ್ರಾಹ್ಮಣರು ಪೂಜೆ ಮಾಡುವ ದೇಗುಲಗಳಿಗೆ ಭೇಟಿ ನೀಡುವುದಿಲ್ಲ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವುದು ಆತಂಕಕಾರಿ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಇಂದಿಗೂ ಸಂಸ್ಕೃತ, ವೇದ, ಪಾಠಶಾಲೆಗಳಿಂದ ಹಿಂದು, ಪುರಾತನ ಸಂಸ್ಕೃತಿ ಜೀವಂತವಾಗಿ ಉಳಿದಿದೆ. ಹಣ, ಚಿನ್ನ, ಆಸ್ತಿಯನ್ನು ಕದಿಯಬಹುದು. ಆದರೆ ವಿದ್ಯೆ ಕದಿಯಲು ಆಗುವುದಿಲ್ಲ. ಹಾಗಾಗಿ ಸಮಾಜದವರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಅಲ್ಲದೆ ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಸವಾಲುಗಳು ಎದುರಾಗುತ್ತಿದ್ದು, ಪತ್ರಕರ್ತರ ವಿರುದ್ಧವೂ ಪಿತೂರಿ ನಡೆಸುವ ಪರಿಸ್ಥಿತಿ ಇದೆ. ಅದರಲ್ಲಿಯೂ ಬ್ರಾಹ್ಮಣ ಪತ್ರಕರ್ತರ ಮೇಲೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ವಿಪ್ರರು ಮಾಧ್ಯಮ ಕ್ಷೇತ್ರದಿಂದ ದೂರವಾಗುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ವಿಧಾನಸೌಧ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಮ್ಮ ಸಮುದಾಯದವರು ಕಾರ್ಯ ನಿರ್ವಹಿಸುತ್ತಿದರಾದರೂ ನಮಗೆ ಸರಿಯಾದ ಮಾಹಿತಿ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಸಾಮಾಜಕ್ಕೆ ಸಿಗಬೇಕಾದ ಸವಲತ್ತು ಹಾಗೂ ಸಹಕಾರದ ಬಗ್ಗೆ ಮಾಹಿತಿ ಪಡೆಯಲು ರಾಜ್ಯ ವಿಕಾಸ ವೇದಿಕೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ವಿಕಾಸ ವೇದಿಕೆಯ ಹನುಮೇಶ್ ಹಾನಗಲ್ ಮಾತನಾಡಿ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಗಣ್ಯರನ್ನು ಗುರುತಿಸಿ ಅವರ ಕಷ್ಟ ಸುಖಗಳಿಗೆ ಕೈಜೋಡಿಸುವ ಕೆಲಸವನ್ನು ವಿಕಾಸ ಸಂಸ್ಥೆ ಮಾಡುತ್ತಿದೆ. ನಮ್ಮ ಸಂಸ್ಥೆ ಜತೆಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಭಾಗಿಯಾಗಿ ಸಂಕಷ್ಟಲ್ಲಿದ್ದ ವಿಪ್ರ ಪತ್ರಕರ್ತರಿಗೆ ಸಕಾಲದಲ್ಲಿ ನೆರವು ನೀಡಿದ್ದಾರೆ ಎಂದರು.
ವಿಕಾಸ ವೇದಿಕೆಯ ಶ್ರೀನಾಥ್ ಜೋಷಿ, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ತೊ.ಚ.ಅನಂತ ಸುಬ್ಬರಾಯ, ಎಂ.ಎನ್. ಅನಂತಮೂರ್ತಿ, ಜಿಲ್ಲಾ ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ್, ತಾಲೂಕು ಅಧ್ಯಕ್ಷ ವಿಜಯಕೇಶವ, ಹಿರಿಯ ಸಂಪಾದಕ ಪ್ರಕಾಶಕ ಎಸ್.ಗಿರಿಜಾ ಶಂಕರ್, ರಾಜ್ಯ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಕೆಪಿಎಸ್ ಪ್ರಮೋದ್, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ರಘುನಾಥ್ ಇದ್ದರು.