

ಬೆಟ್ಟದಪುರ: ಉತ್ತಮ ಆರೋಗ್ಯ ಹಾಗೂ ನೆಮ್ಮದಿ ಬದುಕಿಗಾಗಿ ನಮ್ಮ ಸುತ್ತಮುತ್ತಲಿನ ವಾತಾವರಣ ಸದಾ ಹಸಿರಿನಿಂದ ಕೂಡಿರಬೇಕು ಎಂದು ಪಿರಿಯಾಪಟ್ಟಣ ವಲಯ ಅರಣ್ಯಾಧಿಕಾರಿ ಕಿರಣ್ ಕುಮಾರ್ ಅಭಿಪ್ರಾಯಪಟ್ಟರು.
ಇಲ್ಲಿನ ಚಾಣಕ್ಯ ವಿದ್ಯಾಸಂಸ್ಥೆಯಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಮತ್ತು ಮುಂದಿನ ಪೀಳಿಗೆಗೆ ಆಮ್ಲಜನಕದ ಅವಶ್ಯಕತೆ ಹೆಚ್ಚಾಗಿ ಇದೆ. ಪ್ರತಿಯೊಬ್ಬರೂ ಅರಣ್ಯ ಹಾಗೂ ಅರಣ್ಯ ಸಂಪತ್ತನ್ನು ಉಳಿಸಲು ಕೈ ಜೋಡಿಸಬೇಕು. ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ತಿಳಿದುಕೊಳ್ಳುವಂತೆ ಆಗಿದೆ. ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು. ಸಸಿ ನೆಡುವುದು ದೊಡ್ಡ ವಿಷಯವಲ್ಲ. ಅದನ್ನು ಉಳಿಸಿ, ಬೆಳೆಸಬೇಕು ಎಂದರು.
ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಗದೀಶ್, ನಿರ್ದೇಶಕರಾದ ಧನಂಜಯ, ಅನಿಲ್, ಯದುರಾಜ್, ಹರೀಶ್, ಜಯಣ್ಣ, ಮುಖ್ಯಶಿಕ್ಷಕ ಎಚ್.ಕೆ ತಿಮ್ಮಯ್ಯ ಇದ್ದರು.