

ಲಕ್ಷ್ಮೇಶ್ವರ: ಶಿಕ್ಷಣ ಅತ್ಯಮೂಲ್ಯವಾದ ಸಂಪತ್ತಾಗಿದ್ದು, ಈ ಜ್ಞಾನ ಸಂಪತ್ತನ್ನು ಇತರರಿಗೆ ಹಂಚಿದಷ್ಟು ಸಮೃದ್ಧವಾಗುತ್ತದೆ. ಈ ಮೂಲಕ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ಒಂದು ಮಹತ್ವ ಬರುವಂತೆ ಕಾರ್ಯ ನಿರ್ವಹಿಸಬೇಕು ಎಂದು ಶಿರಹಟ್ಟಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಂ. ಮುಂದಿನಮನಿ ಅಭಿಪ್ರಾಯಪಟ್ಟರು.
ಪಟ್ಟಣದ ಉಮಾ ವಿದ್ಯಾಲಯ ಹೈಸ್ಕೂಲ್ ಆವರಣದಲ್ಲಿ ಲಕ್ಷ್ಮೇಶ್ವರ ದಕ್ಷಿಣ ಉರ್ದು ಪ್ರೌಢಶಾಲಾ ವಿಭಾಗದ ಕ್ಲಸ್ಟರ್ ಮಟ್ಟದ ಕಲೋತ್ಸವ ಕಾರ್ಯಕ್ರಮವನ್ನು ಡ್ರಮ್ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಲೋತ್ಸವ ಮಕ್ಕಳ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಮಕ್ಕಳಲ್ಲಿ ಹುದುಗಿರುವ ಅಂತಃಪ್ರತಿಭೆ ತೋರ್ಪಡಿಸಿ ತನ್ಮೂಲಕ ಉತ್ತಮ ಸಾಧನೆ ಮಾಡುವ ವೇದಿಕೆ ಇದಾಗಿದೆ. ಮಕ್ಕಳು ಜಾಣ್ಮೆಯಿಂದ ಇದರಲ್ಲಿ ಪಾಲ್ಗೊಂಡು ಉತ್ತಮ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತರಬೇಕು ಎಂದರು.
ಜಾನಪದ ನೃತ್ಯ ಪ್ರದರ್ಶನಕ್ಕೆ ಪುರಸಭೆ ಸದಸ್ಯ ವಿಜಯ ಕರಡಿ ಚಾಲನೆ ನೀಡಿದರು. ಕರಾಸನೌ ಸಂಘ ತಾಲೂಕಾಧ್ಯಕ್ಷ ಡಿ.ಎಚ್. ಪಾಟೀಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಿ.ಎಸ್. ಹರಲಾಪುರ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಮಾತನಾಡಿದರು. ಬಿಆರ್ಪಿ ಬಿ.ಎಂ. ಯರಗುಪ್ಪಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಅಂಗವಾಗಿ ಪ್ರತಿಜ್ಞಾವಿಧಿ ಬೋಧಿಸಿದರು. ಮುಖ್ಯೋಪಾಧ್ಯಾಯ ಎಸ್.ಎಚ್ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಎಸ್.ಡಿ. ಲಮಾಣಿ, ಶಿಕ್ಷಣಾಧಿಕಾರಿಗಳ ಸಂಘದ ಎಂ.ಬಿ. ಹೊಸಮನಿ, ಈಶ್ವರ ಮೇಡ್ಲೇರಿ, ವಿ.ಡಿ. ಹುಲಬಜಾರ, ಎ.ಆರ್. ಮಿಯಾನವರ, ಎಂ.ಎನ್. ಭರಮಗೌಡ್ರ, ಎನ್.ಎನ್. ಶಿಗ್ಲಿ, ಆರ್.ಎಫ್. ದೊಡ್ಡಮನಿ, ಎಸ್. ಜಯಾ, ಎ.ಜಿ. ಲಿಂಗಶೆಟ್ಟಿ, ಜಿ.ಎಂ. ಕೆಂಚಕ್ಕನವರ, ಎಚ್.ಎಫ್.ಪೂಜಾರ, ಎಂ.ಎಫ್. ಗೋಣೆಪ್ಪನವರ, ಎಸ್.ಡಿ. ಬಂಡಿವಡ್ಡರ ಹಾಗೂ ಶಿಕ್ಷಕರು ಪಾಲ್ಗೊಂಡಿದ್ದರು. ಸಿಆರ್ಪಿಗಳಾದ ಸತೀಶ ಬೋಮಲೆ, ಎನ್.ಎ. ಮುಲ್ಲಾ, ಉಮೇಶ ನೇಕಾರ, ವಿ.ಎನ್. ಶೆಟ್ಟರ್ ಕಾರ್ಯಕ್ರಮ ನಿರ್ವಹಿಸಿದರು.