

ರಾಯಚೂರು: ರೈತರು ತಂತ್ರಜ್ಞಾನಗಳನ್ನು ಕೃಷಿಯಲ್ಲಿ ತಂತ್ರಜ್ಞಾನಗಳನ್ನು ಅಳವಡಿಕೆ ಮಾಡಿಕೊಳ್ಳುವಂತಹ ಜ್ಞಾನವನ್ನು ಕೃಷಿ ಸಖಿಯರು ನೀಡುವ ಕೆಲಸ ಮಾಡಬೇಕು ಎಂದು ಕೃಷಿ ವಿಜ್ಞಾನಗಳ ವಿವಿ ಕುಲಪತಿ ಡಾ.ಎಂ.ಹನುಮಂತಪ್ಪ ಹೇಳಿದರು.
ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಜೀವನೋಪಾಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳಿಗೆ ಪರಿಸರ ಕೃಷಿ ವಿಧಾನಗಳ ಕುರಿತು ಸೋಮವಾರ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಕುರಿ ಸಾಕಣೆ, ಹೈನುಗಾರಿಕೆ,ಕೋಳಿ ಸಾಕಣೆ ಮುಂತಾದ ಉಪ ಕಸುಬು ಅಳವಡಿಸಿಕೊಂಡು ಆದಾಯ ಹೆಚ್ಚಿಸುವಂತೆ ರೈತರಿಗೆ ಪ್ರೇರೇಪಿಸಬೇಕು ಎಂದರು.
ವಿವಿ ತಾಂತ್ರಿಕ ಸಹಾಯಕ ಡಾ.ಹನುಮಂತ ನಾಯಕ ಮಾತನಾಡಿ, ಕೃಷಿಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದ್ದು, ರೈತರ ವ್ಯವಸಾಯದಲ್ಲಿ ಮತ್ತು ಜೀವನದಲ್ಲಿ ಬದಲಾವಣೆ ತರಲು ಮತ್ತು ರೈತರ ಆದಾಯ ದ್ವಿಗುಣಗೊಳಿಸಲು ಕೃಷಿ ಸಖಿಯರಿಗೆ ತರಬೇತಿ ನೆರವಾಗಲಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿವಿ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಗೌಡಪ್ಪ ಮಾತನಾಡಿ, ಇಂದಿನ ಜನಾಂಗದಲ್ಲಿ ಕಂಡು ಬರುತ್ತಿರುವ ಆರೋಗ್ಯ ಸಮಸ್ಯೆಗಳಿಗೆ ಅಪೌಷ್ಠಿಕ ಮತ್ತು ಕಲುಷಿತ ಆಹಾರ ಕಾರಣವಾಗಿದೆ. ಮಣ್ಣಿನ ಆರೋಗ್ಯ ಸುಧಾರಣೆ, ಜೈವಿಕ ಗೊಬ್ಬರಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಬೇಕಾಗಿದೆ.
ಪರಿಸರ ಸ್ನೇಹಿ ಕೃಷಿ ವಿಧಾನಗಳ ಕುರಿತು ರೈತರಿಗೆ ತಿಳಿಸಿ ಖರ್ಚನ್ನು ಕಡಿಮೆ ಮಾಡಿ ಆದಾಯವನ್ನು ಹೆಚ್ಚಿಸಬೇಕು. ಕೃಷಿಯಲ್ಲಿ ಬೆಳೆಗಳ ವೌಲ್ಯವರ್ಧನೆಯ ಬಗ್ಗೆ ಮಾಹಿತಿ ಪಡೆದುಕೊಂಡು ಕೃಷಿ ಸಖಿಯರು ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಹನುಮಂತಪ್ಪ, ವಿಜ್ಞಾನಿಗಳಾದ ಡಾ.ಜಿ.ಎನ್.ಶ್ರೀವಾಣಿ, ಡಾ.ಕೆ.ಜೆ.ಹೇಮಲತಾ, ಕೌಶಲ್ಯಾಭಿವೃದ್ಧಿ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಶ್ರೀಕಾಂತ, ಶ್ರೀನಾಥ ಉಪಸ್ಥಿತರಿದ್ದರು.