ಸಂಚಾರ ಸಿಕ್ಕು ನಿವಾರಣೆಗೆ ಕಾಮಗಾರಿ ಕೈಗೊಳ್ಳಿರಿ: ರಿಂಗ್​​ ರಸ್ತೆಯ ವಿವಿಧೆಡೆ ಎಸಿಎಸ್ ಪರಿಶೀಲನೆ

ring road visit
Published on

ಬೆಂಗಳೂರು: ನಗರದಲ್ಲಿ ಸಂಚಾರ ಸಿಕ್ಕು ನಿವಾರಣೆಗೆ ಅಗತ್ಯವಿರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ (ಎಸಿಎಸ್) ತುಷಾರ್ ಗಿರಿನಾಥ್ ಅವರು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.

ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ವರೆಗಿನ ಹೊರ ವರ್ತುಲ ರಸ್ತೆಯಲ್ಲಿ ಸುಗಮ ವಾಹನ ಸಂಚಾರ ಕುರಿತು ಗುರುವಾರ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಜಂಟಿ ಸ್ಥಳ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಸಂಚಾರ ಸಿಕ್ಕು ನಿವಾರಣೆ ಮಾಡುವ ಸಲುವಾಗಿ ರಸ್ತೆ ಗುಂಡಿಗಳನ್ನು ಮುಚ್ಚುವುದು, ರಸ್ತೆ ಮೇಲ್ಮೈ ದುರಸ್ತಿ ಕೈಗೊಳ್ಳುವುದು, ಜಂಕ್ಷನ್‌ಗಳ ಅಭಿವೃದ್ಧಿ, ರಸ್ತೆಗಳ ಮೇಲೆ ನೀರು ನಿಲ್ಲದಂತೆ ಕ್ರಮ, ವೈಟ್ ಟಾಪಿಂಗ್ ಕಾಮಗಾರಿ ಹಾಗೂ ಮೆಟ್ರೋ ಕೆಲಸ ನಡೆಯುವ ಸ್ಥಳಗಳಲ್ಲಿ ರಸ್ತೆಗಳನ್ನು ಸುಸ್ತಿಯಲ್ಲಿಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮೆಟ್ರೋ, ಬೆಸ್ಕಾಂ, ಜಲಮಂಡಳಿ ಸಂಸ್ಥೆಗಳು ರಸ್ತೆಗಳಲ್ಲಿ ಕಾಮಗಾರಿ ನಡೆಯುತ್ತಿರುವ ಕಡೆಗಳಲ್ಲಿ ಅವರೇ ರಸ್ತೆ ಸುಸ್ತಿಯಲ್ಲಿಡಬೇಕಿದ್ದು, ಆ ರೊಡ್‌ಗಳಲ್ಲಿ ಮೇಲ್ಮೈ ಹಾಳಾಗಿದ್ದರೆ ರಸ್ತೆಗುಂಡಿಗಳ ದುರಸ್ತಿ ಕೈಗೊಳ್ಳಬೇಕು. ಈ ಸಂಬಂಧ ಕಾಮಗಾರಿ ನಡೆಯುವ ರಸ್ತೆಗಳಲ್ಲಿ ಯಾವ ಇಲಾಖೆ ಕಾಮಗಾರಿ ನಡೆಸಲಾಗುತ್ತಿದೆ ಎಂಬ ನಾಮಫಲಕ ಅಳವಡಿಸುವಂತೆ ನಿರ್ದೇಶಿಸಿದರು.

ಒಳಗೆ-ಹೊರಗೆ ಹೋಗಲು ವಿನ್ಯಾಸ ರೂಪಿಸಿ:

ಹೊರ ವರ್ತುಲ ರಸ್ತೆಯ 20 ಸ್ಥಳಗಳಲ್ಲಿ ಸರ್ವೀಸ್ ರಸ್ತೆಯಿಂದ ಪ್ರಮುಖ ರಸ್ತೆಗೆ ಒಳಗೆ-ಹೊರಗೆ ಹೋಗಲು ವಿನ್ಯಾಸ ರೂಪಿಸಿದರೆ ಶೇ. 30-40 ಸಂಚಾರ ಸಿಕ್ಕು ಕಡಿಮೆ ಆಗಲಿದೆ. ಈ ಸಂಬಂಧ ಪಾಲಿಕೆ ಹಾಗೂ ಸಂಚಾರಿ ವಿಭಾಗದ ಸಹಕಾರದೊಂದಿಗೆ ವಿನ್ಯಾಸ ರೂಪಿಸಿ ತ್ವರಿತವಾಗಿ ಅನುಷ್ಠಾನಗೊಳಿಸಬೇಕು. ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಜಲಾವೃತವಾಗುವುದನ್ನು ತಪ್ಪಿಸಲು ರಾಜಕಾಲುವೆಗಳಲ್ಲಿ ಹೂಳೆತ್ತಿ ಸ್ವಚ್ಚವಾಗಿಡುವ ಜತೆಗೆ ಅಲ್ಲಿನ ಜಂಕ್ಷನ್ ಅಭಿವೃದ್ಧಿಪಡಿಸಲು ವಿನ್ಯಾಸ ಸಿದ್ದಪಡಿಸಿ ಕೆಲಸ ಕೈಗೊಳ್ಳಲು ಎಸಿಎಸ್ ಸೂಚಿಸಿದರು.

ಪರಿಶೀಲನೆ ವೇಳೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಸಂಚಾರ ಪೊಲೀಸ್ ವಿಭಾಗದ ಜಂಟಿ ಆಯುಕ್ತ ಕಾರ್ತಿಕ್ ರೆಡ್ಡಿ, ಮೆಟ್ರೋ ಎಂಡಿ ರವಿಶಂಕರ್, ನಗರ ಪಾಲಿಕೆ ಆಯುಕ್ತರುಗಳಾದ ಕೆ.ಎನ್. ರಮೇಶ್, ಡಿ.ಎಸ್.ರಮೇಶ್, ಪಿ. ಸುನೀಲ್ ಕುಮಾರ್ ಹಾಜರಿದ್ದರು.

ಇಬ್ಲೂರು ಜಂಕ್ಷನ್ ಅಭಿವೃದ್ಧಿಗೆ ಕ್ರಮ:

ರಿಂಗ್ ರಸ್ತೆಯ ಇಬ್ಲೂರು ಜಂಕ್ಷನ್ ಬಳಿ ಪಾದಚಾರಿಗಳ ಸುಗಮ ಸಂಚಾರಕ್ಕೆ ಸ್ಕೈವಾಕ್ ನಿರ್ಮಿಸಬೇಕು. ಆ ಸ್ಥಳದಲ್ಲಿ ಜಲಾವೃತವಾಗದಂತೆ ಹಾಗೂ ಜಂಕ್ಷನ್ ಸಮಗ್ರ ಅಭಿವೃದ್ಧಿ ಮಾಡಬೇಕು. ಜತೆಗೆ ವಾಹನಗಳ ಸಂಚಾರಕ್ಕಾಗಿ ಮ್ಯಾಜಿಕ್ ಬಾಕ್ಸ್ ಅಳವಡಿಸುವ ಬಗ್ಗೆ ಸಾಧಕ-ಬಾಧಕ ಪರಿಶೀಲಿಸಲು ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ನಿರ್ದೇಶಿಸಿದರು.

ಅಗರ ಜಂಕ್ಷನ್ ಬಳಿ ಮೇಲ್ಸೇತುವೆಯ ಮೇಲೆ ಬೀಳುವ ನೀರಿಗೆ ಅಳವಡಿಸಿರುವ ಕೊಳವೆ ಹಾಳಾಗಿದ್ದು, ರಸ್ತೆ ಮೇಲೆ ನೀರು ಬೀಳದಂತೆ ಕ್ರಮ ಕೈಗೊಳ್ಳಲಾಗುವುದು. ಮೇಲ್ಸೇತುವೆ ಕೆಳಭಾಗ ಸಂಪೂರ್ಣ ಹಾಳಾಗಿದ್ದು, ಮಿಲ್ಲಿಂಗ್ ಮಾಡಿ ಇಕೋಫಿಕ್ಸ್ ಬಳಸಿ ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ.

- ಎಂ.ಮಹೇಶ್ವರ್ ರಾವ್, ಜಿಬಿಎ ಮುಖ್ಯ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net