ಹೊಸಕೋಟೆಯಲ್ಲಿ ಕಾಮಗಾರಿಗಳು ಸ್ಥಗಿತ?

Untitled-1
Published on

ಹೊಸಕೋಟೆ : ಈ ಹಿಂದಿನ ಸರ್ಕಾರದಲ್ಲಿ ಭೂಮಿಪೂಜೆ ಮಾಡಿದ್ದ ಹಲವು ಕಾಮಗಾರಿಗಳು ಸ್ಥಗಿತಗೊಂಡಿವೆ ಎಂಬ ಆರೋಪ ಕೇಳಿಬಂದಿದೆ.

2021&22ರಲ್ಲಿ ಹೊಸಕೋಟೆ ನಗರಸಭೆಗೆ 60 ಕೋಟಿ ರೂ. ನಗರೋತ್ಥಾನ ಯೋಜನೆಯಡಿ ಹಣ ಬಿಡುಗಡೆಯಾಗಿ ಭೂಮಿ ಪೂಜೆ ಮಾಡಲಾಗಿತ್ತು. ಆದರೆ ಇಲ್ಲಿಯವರೆಗೂ ಕೇವಲ ಏಳೆಂಟು ಕೋಟಿ ರೂಪಾಯಿಯಷ್ಟೇ ಕಾಮಗಾರಿ ನಡೆದಿದ್ದು, ಇನ್ನುಳಿದವು ಸ್ಥಗಿತಗೊಂಡಿವೆ ಎನ್ನಲಾಗಿದೆ.

ಹೊಸಕೋಟೆ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಆದರೆ ಅಭಿವೃದ್ಧಿ ಆಮೆಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರಿಗೆ ಪ್ರತಿ ನಿತ್ಯ ಅಗತ್ಯ ಮೂಲಸೌಲಭ್ಯ ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಡುವುತ್ತಿದ್ದಾರೆ. ನಗರದ ವರದಾಪುರ, ಓಂಶ್ರೀ ವೃತ್ತದ ಗಣಗಲು ರಸ್ತೆ, ವಿನಾಯಕ ನಗರ, ಕಮ್ಮವಾರಿ ನಗರ, ಎಐಆರ್​ ಬಡಾವಣೆ, ಎಂವಿ ಬಡಾವಣೆ, ಟಿಜಿ ಬಡಾವಣೆ ಹೀಗೆ ನಗರದ ಶೇ.50ಕ್ಕೂ ಹೆಚ್ಚು ಪ್ರದೇಶದಲ್ಲಿ ರಸ್ತೆಗಳು ಹಾಳಾಗಿವೆ. ಪ್ರತಿದಿನ ಸಾರ್ವಜನಿಕರು ರಸ್ತೆ ಸಂಚಾರ ಮಾಡುವಾಗ ಸಮಸ್ಯೆ ಎದುರಿಸುತ್ತಿದ್ದಾರೆ. ಒಂದೆಡೆ ರಸ್ತೆ ಸಮಸ್ಯೆ ಆದರೆ ಒಂದೆಡೆ ಮೋರಿ ಸಮಸ್ಯೆ, ಬೀದಿ ದೀಪ, ಕಸದ ಸಮಸ್ಯೆ ಹೀಗೆ ಪ್ರತಿನಿತ್ಯ ಸಮಸ್ಯೆಯಲ್ಲಿ ಜನ ಒದ್ದಾಡುತ್ತಾ ದಿನ ದೂಡುವಂತಾಗಿದೆ ಎಂಬ ಬೇಸರ ವ್ಯಕ್ತವಾಗುತ್ತಿದೆ.

ಮರುಕ್ರಿಯಾ ಯೋಜನೆಗೂ ಕಿಮ್ಮತ್ತಿಲ್ಲ : ಶಾಸಕ ಶರತ್​ ಬಚ್ಚೇಗೌಡ ಮರು ಕ್ರಿಯಾ ಯೋಜನೆಗೆ ಅನುಸಾರವಾಗಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಟೆಂಡರ್​ ಪ್ರಕ್ರಿಯೆ ಮುಗಿದು ವರ್ಕ್​ ಆರ್ಡರ್​ ನೀಡಿದ್ದರೂ ಗುತ್ತಿಗೆದಾರರು ಕೆಲಸ ಆರಂಭಿಸಿಲ್ಲ. ಈ ಬಗ್ಗೆ ನಗರಸಭೆ ಜನಪ್ರತಿನಿಧಿಗಳಿಂದ ಉನ್ನತಮಟ್ಟದ ಅಧಿಕಾರಿಗಳವರೆಗೆ ಯಾರೂ ಮಾತನಾಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಈ ಹಿಂದಿನ ಸರ್ಕಾರದ ಅನುದಾನದಡಿ ಆರಂಭವಾದ ಕಾಮಗಾರಿಗಳು ಸ್ಥಗಿತಗೊಂಡಿವೆ, ಮರು ಕ್ರಿಯಾಯೋಜನೆ ಬಳಿಕ ಟೆಂಡರ್​ ಆದರೂ ಕಾಮಗಾರಿಗಳ ಆರಂಭಕ್ಕೆ ಕಾಲ ಕೂಡಿಬಂದಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮೌನವಹಿಸಿದ್ದಾರೆ. | ವರದಾಪುರ ನಾಗರಾಜ್​, ಸಾಮಾಜಿಕ ಹೋರಾಟಗಾರ ಹೊಸಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net