

ತೇರದಾಳ: ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಬಸವೇಶ್ವರ ಸಮುದಾಯ ಭವನದ ಕಟ್ಟಡ ಕಾಮಗಾರಿಯನ್ನು ಪೊಲೀಸ್ ಬಂದೋಬಸ್ತ್ ನಡುವೆ ಗುರುವಾರ ಆರಂಭಿಸಲಾಯಿತು.
ಪಟ್ಟಣದ ಬಿಎಲ್‌ಡಿಇ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ ಪಕ್ಕದಲ್ಲಿರುವ ಪುರಸಭೆ ಆಸ್ತಿ ಸಂಖ್ಯೆ- 35/17ರಲ್ಲಿ 2021-22ನೇ ಸಾಲಿನ ಶಾಸಕರ ವಿಶೇಷ ಅನುದಾನದಡಿ ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು 2.15 ಕೋಟಿ ಅನುದಾನ ಮಂಜೂರಾಗಿ, 2023ರ ಜನವರಿಯಲ್ಲಿ ಕಾಮಗಾರಿಗೆ ಚಾಲನೆ ಆದೇಶ ಆಗಿತ್ತು. ಆದರೆ, ಸ್ಥಳೀಯರು, ಪುರುಷರ ಶೌಚಗೃಹಕ್ಕೆ ಬೇಡಿಕೆಯೊಡ್ಡಿದ್ದ ವೇಳೆ ಆರಂಭದಲ್ಲೇ ಕಾಮಗಾರಿ ಸ್ಥಗಿತಗೊಂಡಿತ್ತು. ತಕರಾರುಗಳಿಂದ 20 ತಿಂಗಳುಗಳಿಂದ ನನೆಗುದಿಗೆ ಬೀಳುವಂತಾಗಿತ್ತು.
ಇದೀಗ ಪುರಸಭೆಯಿಂದಲೇ ಶೌಚಗೃಹ ನಿರ್ಮಾಣ ಜತೆಗೆ ಸಮುದಾಯ ಭವನದ ಕಟ್ಟಡಕ್ಕೆ ನೆಲಸಮತಟ್ಟು ಮಾಡುವ ಕಾರ್ಯವೂ ನಡೆದಿದೆ. ತಾಲೂಕು ಕೇಂದ್ರಸ್ಥಾನವಾದ ಪಟ್ಟಣದ ಸೌಂದರ್ಯ ವೃದ್ಧಿ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಉತ್ತಮ ಅಭಿಪ್ರಾಯಗಳು ಕೇಳಿಬರುತ್ತಿವೆ.
ಪುರಸಭೆ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಅಕ್ರಮಿಸಿಕೊಂಡು ಕಟ್ಟಿಗೆ ಅಡ್ಡೆ ನಡೆಸುತ್ತಿದ್ದರು. 2019ರಲ್ಲಿ ಅಧಿಕಾರಿಗಳು ಅತಿಕ್ರಮಿತ ಜಾಗದ ತೆರವಿಗೆ ಕ್ರಮ ಕೈಗೊಂಡಿದ್ದರು. ಖಾಲಿ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸುವ ನಿಟ್ಟಿನಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಮೀಸಲಿಡಲಾಗಿತ್ತು.
ಸ್ಥಳೀಯರ ಬೇಡಿಕೆಗನುಗುಣವಾಗಿ ಪುರುಷ ಶೌಚಗೃಹ ನಿರ್ಮಾಣ ಕಾರ್ಯ ಆರಂಭಿಸಲಾಗಿದೆ. ಪುರಸಭೆ ಆಸ್ತಿ ಸಂಖ್ಯೆ 35/17ರಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗಿದೆ. -ಆನಂದ ಕೆಸರಗೊಪ್ಪ, ಮುಖ್ಯಾಧಿಕಾರಿ, ಪುರಸಭೆ, ತೇರದಾಳ ಪುರಸಭೆ ಆಸ್ತಿಗಳಲ್ಲಿ ಅಭಿವೃದ್ಧಿ ಜತೆಗೆ ಸರ್ಕಾರದ ಅನುದಾನದ ಸದ್ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸುವ ಮೂಲಕ ನಗರ ಸೌಂದರ್ಯ ವೃದ್ಧಿಗೆ ಅನುವು ಮಾಡಿಕೊಡಬೇಕು. -ಶಿಲ್ಪಾ ಗೌತಮ ರೋಡಕರ, ಅಧ್ಯಕ್ಷರು, ಪುರಸಭೆ ತೇರದಾಳ