

ಮಂಗಳೂರು : ಮುಕ್ಕದ ಶ್ರೀನಿವಾಸ್ ಯುನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಂಡ್ ಟೆಕ್ನಾಲಜಿಯಲ್ಲಿ ಮುಂದಿನ ಪೀಳಿಗೆಯ ಶಕ್ತಿ ಸಂಗ್ರಹ - ಸುಧಾರಿತ ಇಲೆಕ್ಟ್ರಾನಿಕ್ಸ್ ಮತ್ತು ಸಂವೇದಕ ತಂತ್ರಜ್ಞಾನಗಳ ಸಂಯೋಜನೆ ವಿಷಯದ ಕುರಿತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಪ್ರಾಯೋಜಿತ ಆರು ದಿನಗಳ ಅಟಲ್ ಎಫ್‌ಡಿಪಿ ಕಾರ್ಯಾಗಾರ ಮತ್ತು ತರಬೇತಿ ಶಿಬಿರ ನಡೆಯಿತು.
ಕಾರ್ಯಾಗಾರ ಉದ್ಘಾಟಿಸಿದ ವಿಜ್ಞಾನಿ, ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನೆ ಕೇಂದ್ರದ ಜೈವಿಕ
ರಸಾಯನಶಾಸ್ತ್ರ ಪ್ರಯೋಗಾಲಯದ ಮುಖ್ಯಸ್ಥ ಡಾ.ತಿಮ್ಮಯ್ಯ ಗೋವಿಂದರಾಜು ಮಾತನಾಡಿ ‘ ಇಂಧನ, ಪರಿಸರ ಸಂರಕ್ಷಣೆ ಮತ್ತು ಆಧುನಿಕ ಶಿಕ್ಷಣ ಮೂರು ಪ್ರಮುಖ ಅಂಶಗಳಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನವು ರಾಷ್ಟ್ರದ ಅಭಿವೃದ್ಧಿಗೆ ನೆರವಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ತ್ವರಿತ ವೇಗದಲ್ಲಿ ರಾಷ್ಟ್ರದ ತಾಂತ್ರಿಕ ಪ್ರಗತಿ ಸಾಧಿಸಲು ಹಲವಾರು ಸುಧಾರಣೆಗಳನ್ನು ಮಾಡಿದ್ದಾರೆ. ಜನತೆ ದೇಶದ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕೇ ವಿನಃ ಪ್ರಗತಿಯನ್ನು ಅಡ್ಡಿಪಡಿಸುವ ಚಿಂತನೆಯ ಬಗ್ಗೆ ಅಲ್ಲ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ರಾಮಕೃಷ್ಣ ಎನ್ ಹೆಗಡೆ ಮಾತನಾಡಿ,ಅಟಲ್ ಅಭಿವೃದ್ಧಿ ಕೌಶಲ್ಯ ವರ್ಧಿತ ತರಬೇತಿ
ಕಾರ್ಯಕ್ರಮಗಳು ಅಧ್ಯಾಪಕರ ಮತ್ತು ವಿದ್ಯಾರ್ಥಿಗಳ ಜ್ಞಾನವನ್ನು ವೃದ್ಧಿಗೊಳಿಸುತ್ತದೆ ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಉಪ ಕುಲಾಧಿಪತಿ ಪ್ರೊ .ಕೆ. ಸತ್ಯನಾರಾಯಣ ರೆಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದ ಸಮನ್ವಯಕಾರ ಡಾ.ನವೀನ್ ಕುಮಾರ್ ಜೆ. ಆರ್., ಕಾರ್ಯಾಗಾರದ ಸಹ ಸಮನ್ವಯಕಾರ ಡಾ. ಪ್ರವೀಣ್ ಬಿ. ಎಂ. ಉಪಸ್ಥಿತರಿದ್ದರು. ಪ್ರೊ. ಕೆ. ಶ್ರೀನಾಥ್ ರಾವ್ ಮುಖ್ಯ ಅತಿಥಿಯನ್ನು ಸಭೆಗೆ ಪರಿಚಯಿಸಿದರು. ಪ್ರೊ.ಶಿಲ್ಪಾ ಎಸ್ ವಂದಿಸಿದರು.
ಪ್ರೊ.ರೋಹನ್ ಫೆರ್ನಾಂಡಿಸ್ ಮತ್ತು ಪ್ರೊ.ಶ್ವೇತಾ ಪೈ ಕಾರ್ಯಕ್ರಮ ನಿರೂಪಿಸಿದರು.