

ಮಡಿಕೇರಿ:
ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬAಧಿಸಿದ ಕಾಯ್ದೆಗಳ ಬಗ್ಗೆ ಮಾಹಿತಿ ಪಡೆದು ಸರ್ಕಾರಿ ಭೂಮಿ ಸಂರಕ್ಷಿಸುವತ್ತ ಸಂಬAಧಪಟ್ಟ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎ. ಪಾಟೀಲ್ ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಕಂದಾಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕೊಡಗು ಜಿಲ್ಲಾಡಳಿತ ಸಹಯೋಗದೊಂದಿಗೆ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬAಧಿಸಿದ ಕಾಯ್ದೆಗಳ ಬಗ್ಗೆ ಶನಿವಾರ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದರು.
ಭೂ ಕಬಳಿಕೆ ನಿರಂತರವಾಗಿ ನಡೆದಿದ್ದು, ಭೂ ಕಬಳಿಕೆ ಆಗದಂತೆ ತಡೆಯುವುದು ಅತೀ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡುವುದು ಅಥವಾ ಭೂಕಬಳಿಕೆ ಆಗದಂತೆ ಗಮನಹರಿಸುವುದು ವಿವಿಧ ಇಲಾಖೆಗಳ ಜವಾಬ್ದಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರುವುದರಿಂದ ಭೂಮಾಫಿಯ ಹೆಚ್ಚಾಗಿದೆ. ಗೋಮಾಳ, ಕೆರೆಕಟ್ಟೆ, ಹಳ್ಳಕೊಳ್ಳ, ರಾಜ ಕಾಲುವೆ ಸೇರಿದಂತೆ ಎಲ್ಲವನ್ನು ಒತ್ತುವರಿ ಮಾಡುತ್ತಿದ್ದಾರೆ. ಇದನ್ನು ತಡೆಯುವುದು ವಿವಿಧ ಇಲಾಖೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಕರ್ನಾಟಕ ಲ್ಯಾಂಡ್ ರೆವೆನ್ಯೂ ಆ್ಯಕ್ಟ್ ಸೇರಿದಂತೆ ವಿವಿಧ ಕಾಯ್ದೆಗಳಿದ್ದರೂ ಸಹ ಭೂ ಕಬಳಿಕೆ ನಡೆಯುತ್ತಿದೆ. ಇದಕ್ಕೆ ಪ್ರಮುಖ ಕಾರಣ ಶಿಕ್ಷೆ ಪ್ರಮಾಣ ಕಡಿಮೆ ಎಂದರೆ ತಪ್ಪಾಗಲಾರದು.
ಮೂರು ವರ್ಷ ಜೈಲು ಹಾಗೂ ೨೫ ಸಾವಿರ ರೂ. ದಂಡ ಇದ್ದರೂ ಸಹ ಭೂ ಕಬಳಿಕೆಗೆ ಮುಂದಾಗುತ್ತಿದ್ದಾರೆ. ಒತ್ತುವರಿ ಮಾಡಿರುವ ಅಥವಾ ಭೂ ಕಬಳಿಕೆ ಮಾಡಿರುವ ಆಸ್ತಿಯನ್ನು ಮಾರುತ್ತಾರೆ. ಆ ನಿಟ್ಟಿನಲ್ಲಿ ಕೊಳ್ಳುವವರು ಯೋಚಿಸಬೇಕು. ಜೊತೆಗೆ ಪರಾಮರ್ಶಿಸಬೇಕು. ಸುಮ್ಮನೆ ಏಕಾಏಕಿ ಭೂಮಿ ಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಮಾತನಾಡಿ ಕುರುಕ್ಷೇತ್ರ ನಡೆದಿರುವುದೇ ಭೂಮಿಗಾಗಿ ಎನ್ನುವುದನ್ನು ಯಾರೂ ಮರೆಯುವಂತಿಲ್ಲ. ಅನಾದಿಕಾಲದಿಂದಲೂ ನೀರು, ಭೂಮಿಗಾಗಿ ಯುದ್ದಗಳೇ ನಡೆದಿವೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ. ಭಾರತದಲ್ಲಿ ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಹೆಚ್ಚಳ ಆಗುತ್ತಿದೆ. ಜತೆಗೆ ಜನರಲ್ಲಿ ದುರಾಸೆಯು ಸಹ ಹೆಚ್ಚಾಗಿದೆ. ಆದ್ದರಿಂದ ಭೂ ಕಬಳಿಕೆಯೂ ಸಹ ಅಧಿಕವಾಗುತ್ತಿದೆ. ಆದ್ದರಿಂದ ಸರ್ಕಾರಿ ಭೂಮಿ ಸಂರಕ್ಷಣೆ ಬಗ್ಗೆ ಅಧಿಕಾರಿಗಳು ವಿಶೇಷ ಗಮನಹರಿಸಬೇಕು ಎಂದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಕೆ.ಎಚ್. ಅಶ್ವತ್ಥನಾರಾಯಣ ಗೌಡ ಮಾತನಾಡಿ ಸರ್ಕಾರಿ ಭೂಮಿ ಒತ್ತುವರಿ ಆಗಿದ್ದಲ್ಲಿ ಅದನ್ನು ತೆರವುಗೊಳಿಸುವುದು ಪ್ರಮುಖ ಕಾರ್ಯವಾಗಿದೆ. ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಸಂಬAಧಿಸಿದAತೆ ಸರ್ಕಾರಿ ಭೂಮಿ ಸಂರಕ್ಷಿಸುವಲ್ಲಿ ಅಧಿಕಾರಿಗಳು ದೃಢಸಂಕಲ್ಪ ಮಾಡಬೇಕು. ಈ ಬಗ್ಗೆ ಇಚ್ಛಾಶಕ್ತಿ ಇರಬೇಕು. ಸರ್ಕಾರಿ ಭೂಮಿ ತೆರವುಗೊಳಿಸುವ ಸಂದರ್ಭದಲ್ಲಿ ಸ್ಥಳ ಮಹಜರು, ದಿನಾಂಕ ನಮೂದು ಮಾಡಬೇಕು. ಸರ್ವೆ ಜೊತೆಗೆ ಪಂಚನಾಮೆ ಮಾಡಿಸಬೇಕು. ಎಲ್ಲಾ ಹಂತದಲ್ಲಿ ದಿನಾಂಕ ನಮೂದು ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಹೊಸಮನಿ ಪುಂಡಲೀಕ ಮಾತನಾಡಿ ಕಾನೂನಿನಲ್ಲಿ ಎರಡು ರೀತಿ ಇದ್ದು, ಒಂದು ಮನುಷ್ಯ ಮಾಡಿದ ಕಾನೂನು, ಇನ್ನೊಂದು ಪ್ರಕೃತಿದತ್ತವಾದ ನಿಯಮಗಳಿದ್ದು, ಸಂವಿಧಾನದ ನಿಯಮಗಳು ಒಂದು ವ್ಯವಸ್ಥೆಯಲ್ಲಿ ಕಾನೂನು ಆಗಿದ್ದು, ಇದನ್ನು ಪ್ರತಿಯೊಬ್ಬರೂ ಪಾಲಿಸುವುದು ಅತ್ಯಗತ್ಯವಾಗಿದೆ ಎಂದರು.
ಭೂ ದಾಖಲೆಗಳ ಇಲಾಖೆಯ ಉಪ ನಿರ್ದೇಶಕರಾದ ಎಲ್. ನಾರಾಯಣಸ್ವಾಮಿ ಮಾತನಾಡಿ ಒಂದು ಗೊತ್ತು ಪಡಿಸುವ ಪ್ರದೇಶ, ಗಡಿ ವಿಸ್ತೀರ್ಣ, ದಾರಿ, ಮತ್ತಿತರ ಬಗ್ಗೆ ಸರ್ವೆ ಮಾಡಲಾಗುತ್ತದೆ ಎಂದು ಹೇಳಿದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್.ಪಾಲಯ್ಯ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭಾ, ನಗರಸಭೆ ಕಂದಾಯ ಅಧಿಕಾರಿ ಎಂ.ಎ. ತಾಹಿರ್ ಮಾತನಾಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್, ಜಗನ್ನಾಥ್, ತಹಸೀಲ್ದಾರ್ ಪ್ರವೀಣ್ ಕುಮಾರ್, ಉಮೇಶ್ ಮತ್ತಿತರರು ಇದ್ದರು.