

ಲಿಂಗಸುಗೂರು: ರೈತರ ತಕರಾರು ಕಾರಣಕ್ಕೆ ಕಳೆದೊಂದು ವರ್ಷದಿಂದ ನನೆಗುದಿಗೆ ಬಿದ್ದಿದ್ದ ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿ 150ಎ (ಲಿಂಗಸುಗೂರು-ಕಸಬಾ ಲಿಂಗಸುಗೂರು) ಕಾಮಗಾರಿಯನ್ನು ಎನ್‌ಎಚ್ ಪ್ರಾಧಿಕಾರ, ಕಂದಾಯ ಇಲಾಖೆ ಅಧಿಕಾರಿಗಳು ಗುರುವಾರ ಪೊಲೀಸ್ ಬಂದೋಬಸ್ತ್‌ನಲ್ಲಿ ಮರು ಆರಂಭಿಸಿದರು.
ತಾಲೂಕಿನ ಹೊನ್ನಳ್ಳಿ ಗ್ರಾಮದಿಂದ ಮಸ್ಕಿಯ ಮುದಬಾಳ ಕ್ರಾಸ್‌ವರೆಗೆ 180 ಕೋಟಿ ರೂ. ವೆಚ್ಚದಲ್ಲಿ ಗುತ್ತಿಗೆ ಪಡೆದ ಅಮ್ಮಾಪೂರ ಇನ್‌ಫ್ರಾಸ್ಟ್ರಕ್ಚರ್ ಪ್ರೈ.ಲಿ. ಕಂಪನಿ 2022ರಲ್ಲಿ 39 ಕಿಮೀವರೆಗೆ ಹೆದ್ದಾರಿ ಕಾಮಗಾರಿ ಆರಂಭಿಸಿತ್ತು.
ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಲಿಂಗಸುಗೂರು ಪಟ್ಟಣದಿಂದ ಕಸಬಾ ಲಿಂಗಸುಗೂರಿಗೆ ಹೋಗುವ ಮಾರ್ಗ ಮಧ್ಯದಲ್ಲಿ 2 ಕಿಮೀ ರಸ್ತೆ ಕಾಮಗಾರಿಗೆ ಹೆಚ್ಚಿನ ಭೂ ಪರಿಹಾರಕ್ಕಾಗಿ ರೈತರು ತಕರಾರು ತೆಗೆದು ಕೋರ್ಟ್ ಮೆಟ್ಟಿಲೇರಿದ್ದರು. ಕಾಮಗಾರಿ ಅರ್ಧಕ್ಕೆ ಬಿಟ್ಟಿದ್ದರಿಂದ ರಸ್ತೆ ಸಂಪೂರ್ಣ ಹಾಳಾಗಿ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದ್ದು, ಅಪಘಾತ ಪ್ರಕರಣಗಳು ಹೆಚ್ಚಿದ್ದವು.
ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಧಾರವಾಡದ ವಿಶೇಷ ಭೂ ಸ್ವಾಧೀನ ಅಧಿಕಾರಿ ಕ್ಯಾಪ್ಟನ್ ಶ್ರೀನಿವಾಸಗೌಡ ನೇತೃತ್ವದಲ್ಲಿ ಹೆದ್ದಾರಿ ಪ್ರಾಧಿಕಾರದ ಇಇ ವಿಜಯ ಪಾಟೀಲ್, ಎಇಇ ಕೃಷ್ಣಮೂರ್ತಿ, ಎಇ ಗೋಪಾಲ್, ರಾಜಶೇಖರ, ವಿವೇಕರೆಡ್ಡಿ, ತಹಸೀಲ್ದಾರ್ ಸತ್ಯಮ್ಮ, ಪಿಐ ಪುಂಡಲೀಕ ಪಟಾತ್ತರ, ಪೊಲೀಸ್ ಸಿಬ್ಬಂದಿ, ಹೆದ್ದಾರಿ ಕಚೇರಿ ಸಿಬ್ಬಂದಿ ಸಮ್ಮುಖದಲ್ಲಿ ಹೆದ್ದಾರಿ ಕಾಮಗಾರಿ ಆರಂಭಿಸಲಾಯಿತು.