

ಚಿಕ್ಕಮಗಳೂರು: ಕರೊನಾ ಹೆಮ್ಮಾರಿ ದೂರದ ಊರುಗಳ ವಲಸೆ ಕಾರ್ವಿುಕರನ್ನು ಒಂದಲ್ಲ ಒಂದು ರೀತಿಯಲ್ಲಿ ಆವರಿಸಿದ್ದು, ಸದ್ಯ ಊರು ಸೇರಿಕೊಂಡರೆ ಸಾಕಪ್ಪಾ ಎಂದುಕೊಂಡಿರುವ ಸ್ಥಿತಿಯಲ್ಲಿ ಕಾರ್ವಿುಕರು ಹೈರಾಣಾಗುತ್ತಿದ್ದಾರೆ. ಕೆಲ ಕಾರ್ವಿುಕರಿಗೆ ಭಾನುವಾರ ಪಾಸ್ ಸಿಕ್ಕಿದ್ದು ಊರಿಗೆ ಪ್ರಯಾಣ ಬೆಳೆಸಿದರು.
ಲಾಕ್ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಸಾಕಷ್ಟು ಸಮಸ್ಯೆ ಅನುಭವಿಸಿ ಸೋತಿರುವ, ಕೈಯಲ್ಲಿ ಹಣವೂ ಇಲ್ಲದೆ ಪರಿತಪಿಸುತ್ತಿರುವುದರ ನಡುವೆಯೂ ಪಾಸ್ಗಾಗಿ ಪರದಾಡಿದರು. ಎರಡು ದಿನಗಳ ಹರಸಾಹಸದಿಂದ ಕೊನೆಗೂ ಪಾಸ್ ಪಡೆದುಕೊಂಡ ಉತ್ತರ ಭಾರತದ ನೂರಾರು ಕಾರ್ವಿುಕರು ದುಬಾರಿ ಪ್ರಯಾಣ ದರ ನೀಡಿ ಭಾನುವಾರ ತಮ್ಮ ಊರಿನತ್ತ ಹೆಜ್ಜೆ ಹಾಕಿದರು.
ಕೆಲಸವಿಲ್ಲದೆ ಕೈಗೆ ಸಂಪಾದನೆ ಇಲ್ಲದ ಸ್ಥಿತಿಯಲ್ಲಿ ಒಂದು ದಿನವೂ ಇಲ್ಲಿರಲು ಸಾಧ್ಯವಾಗದ ಸ್ಥಿತಿಯಲ್ಲಿ ಕಟ್ಟಡ ಕಾರ್ವಿುಕರು, ಹೋಟೆಲ್ ಕಾರ್ವಿುಕರು, ರಸ್ತೆ ಬದಿ ಪಾನಿಪೂರಿ ಮಾರಾಟಗಾರರು, ಅಂಗಡಿ-ಮುಂಗಟ್ಟುಗಳಲ್ಲಿ ಕಾರ್ವಿುಕರಾಗಿರುವವರು ಪಾಸ್ಗಾಗಿ ಪ್ರಯತ್ನ ಪಡುತ್ತಲೇ ಇದ್ದರು. ಇವರಲ್ಲಿ ಗ್ರಾಮಾಂತರ ಪ್ರದೇಶದ ತೋಟ ಕಾರ್ವಿುಕರು ಮಾತ್ರವಲ್ಲ, ಅಂಗಡಿ ಮುಂಗಟ್ಟು, ಬೇಕರಿಗಳಲ್ಲಿ ಕಾರ್ವಿುಕರಾಗಿ ಅಂದಂದಿನ ದುಡಿಮೆಯಿಂದ ಬದುಕು ಕಟ್ಟಿಕೊಂಡವರೂ ಸೇರಿದ್ದಾರೆ.
ಪಾಸ್ ನಿರೀಕ್ಷೆಯಲ್ಲಿ ಸೇವಾಸಿಂಧು ಆಪ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದ ಸಾಕಷ್ಟು ಕಾರ್ವಿುಕರಿಗೆ ಭಾನುವಾರ ಊರಿನತ್ತ ಪಯಣಿಸಲು ವ್ಯವಸ್ಥೆ ಮಾಡುವುದಾಗಿ ಜಿಲ್ಲಾಡಳಿತ ತಿಳಿಸಿತ್ತು. ಶನಿವಾರ ಸಂಜೆಯವರೆಗೆ ಆಪ್ನಲ್ಲಿ ನೋಂದಾಯಿಸಿಕೊಂಡ ಕಾರ್ವಿುಕರಿಗೆ ಸಹ ರಾತ್ರಿ ದೂರವಾಣಿ ಕರೆ ಮಾಡಿದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಬೆಳಗ್ಗೆ 7 ಗಂಟೆಗೆ ತಾಲೂಕು ಕಚೇರಿ ಆವರಣದಲ್ಲಿ ಹಾಜರಿರುವಂತೆ ಸೂಚಿಸಿ, ಸಾರಿಗೆ ನಿಗಮದ ಬಸ್ಗಳಲ್ಲಿ ತೆರಳಬಹುದು ಎಂದು ತಿಳಿಸಿದ್ದರು.
ಬೆಳಂಬೆಳಗ್ಗೆ ಹಾಜರು: ಊರು ತಲುಪಿದರೆ ತಮ್ಮ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದೆಂಬ ಆತುರದಲ್ಲಿರುವ ನೂರಾರು ಕಾರ್ವಿುಕರು ಭಾನುವಾರ ಬೆಳಗ್ಗೆ 6 ಗಂಟೆ ವೇಳೆಗೆಲ್ಲ ನಗರದ ತಾಲೂಕು ಕಚೇರಿ ಆವರಣಕ್ಕೆ ಲಗೇಜಿನೊಂದಿಗೆ ಹಾಜರಾಗಿದ್ದರು. 7 ಗಂಟೆ ಕಳೆಯಿತು. 9 ಗಂಟೆ ಆಯಿತು. ಸಾರಿಗೆ ನಿಗಮದ ಯಾವ ಬಸ್ ಬಂದಿರಲಿಲ್ಲ. ಇತ್ತ ಬರ ಹೇಳಿದ್ದ ತಾಲೂಕು ಕಚೇರಿಯ ಯಾವ ಸಿಬ್ಬಂದಿಯೂ ಬಂದಿರಲಿಲ್ಲ.
9 ಗಂಟೆ ಬಳಿಕ ಒಬ್ಬೊಬ್ಬರಾಗಿಯೇ ಬರತೊಡಗಿದ ಸಿಬ್ಬಂದಿ ಸಹ ಕಾರ್ವಿುಕರ ಅಳಲು ಕೇಳಲಿಲ್ಲ. ಬೆಳಗ್ಗೆ 9.30ರ ಬಳಿಕ ಕಚೇರಿಯಲ್ಲಿದ್ದ ಸಿಬ್ಬಂದಿಯ ಬಳಿ ವಿಚಾರಿಸಿದಾಗ, ಯಾವುದೇ ರಚನಾತ್ಮಕ ಉತ್ತರ ಸಿಗದೆ ನಿರಾಸೆಗೆ ಕಾರಣವಾಯಿತು. ಕನ್ನಡ ಭಾಷೆ ಬಾರದೆ ಅನೇಕರು ತಮ್ಮ ಅನಿಸಿಕೆಗಳನ್ನು ಸಹ ಹೇಳಿಕೊಳ್ಳಲಾಗದೆ ಪೇಚಾಡುತ್ತಿದ್ದುದು ಕಂದು ಬಂದಿತಲ್ಲದೆ, ನಿರ್ವಾಹವಿಲ್ಲದೆ ತಾಲೂಕು ಕಚೇರಿ ಆವರಣದ ಕಲ್ಲು ಬೆಂಚುಗಳು ಹಾಗೂ ಮರದ ನೆರಳನ್ನು ಆಶ್ರಯಿಸಿದರು.
ಹುಬ್ಬಳ್ಳಿವರೆಗೆ ಬಸ್ ಪ್ರಯಾಣ: ಬೆಳ್ಳಂಬೆಳಗ್ಗೆ ಊರಿಗೆ ಹೊರಟು ಬಿಡಬಹುದು ಎಂದು ಬಹು ನಿರೀಕ್ಷೆಯಲ್ಲಿ ಬಂದಿದ್ದ ಕಾರ್ವಿುಕರು ಉಪಾಹಾರದ ವ್ಯವಸ್ಥೆ ಮಾಡಿಕೊಳ್ಳದೆ ಆತುರಾತುರವಾಗಿ ಧಾವಿಸಿದ್ದರು. ರಾತ್ರಿ ಕರೆ ಮಾಡಿ ಬರುವಂತೆ ಸೂಚಿಸಿದ್ದ ಸಿಬ್ಬಂದಿಯಿಂದ ಯಾವುದೇ ರೀತಿಯ ಸ್ಪಂದನೆ ದೊರೆಯದ ಬಗ್ಗೆ ಸಾಕಷ್ಟು ಕಾರ್ವಿುಕರು ಅಸಮಾಧಾನ ವ್ಯಕ್ತಪಡಿಸಿದರು. ನಗರದಿಂದ ಶೀಘ್ರ ಬಸ್ ವ್ಯವಸ್ಥೆ ಕಲ್ಪಿಸಿದ್ದರೆ ಬೇಗನೆ ಊರು ತಲುಪಿಕೊಳ್ಳಬಹುದಿತ್ತು ಎಂದು ಕಳೆದ ಮೂರು ವರ್ಷಗಳಿಂದ ನಗರದಲ್ಲೇ ಇರುವ ಇಂಜಿನಿಯರ್ ಕಮಲ್ ಮಾಧ್ಯಮದವರ ಜತೆ ಹೇಳಿಕೊಂಡರು.
ಸೇವಾ ಸಿಂಧು ಆಪ್ನಲ್ಲಿ ನಗರದಿಂದ ಹುಬ್ಬಳ್ಳಿವರೆಗೆ ತೆರಳಲು ಈ ಕಾರ್ವಿುಕರಿಗೆ ಪಾಸ್ಗಳನ್ನು ಖಚಿತಪಡಿಸಲಾಗಿತ್ತು. ಹುಬ್ಬಳ್ಳಿಯಿಂದ ಶ್ರಮಿಕ್ ಎಕ್ಸ್ಪ್ರೆಸ್ ರೈಲು ಈ ಕಾರ್ವಿುಕರನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ಯಲಿದ್ದು, ಒಟ್ಟು ಸುಮಾರು 1500 ಕಿ.ಮೀ. ಕ್ರಮಿಸಿದ ಬಳಿಕವಷ್ಟೇ ಗೋರಖ್ಪುರ ತಲುಪಿ ತಮ್ಮ ಊರು ಸೇರಿಕೊಳ್ಳಬೇಕಿದೆ.
ಕೊನೆಗೂ ಮಧ್ಯಾಹ್ನದವರೆಗೆ ಕಾದು ಕಾದು ಬೇಸತ್ತ ಬಳಿಕ 12 ಗಂಟೆಯಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಹುಬ್ಬಳ್ಳಿಯತ್ತ ಈ ಕಾರ್ವಿುಕರು ಪಯಣ ಬೆಳೆಸಿದರು.