

ಹೂವಿನಹಡಗಲಿ: ತಾಲೂಕಿನಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಶಾಲೆಗೆ ಕರೆತರುವ ಮೂಲಕ ಅವರ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಭೀಮಪ್ಪ ಲಾಳಿ ಹೇಳಿದರು.
ಪಟ್ಟಣದ ರಾಜೀವ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಬೇಸಿಗೆ ಹೆಚ್ಚಾಗಿರುವುದರಿಂದ ಶಾಲೆಗಳಲ್ಲಿ ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಬೇಕು. ಗ್ರಾಪಂ ಸಿಬ್ಬಂದಿ ಶಾಲೆ ಬಿಟ್ಟ ಮಕ್ಕಳನ್ನು ಪಟ್ಟಿ ಮಾಡಿದ್ದು, ಶಿಕ್ಷಣ ಇಲಾಖೆ ಸಿಬ್ಬಂದಿ ಎರಡೂ ವರದಿಗಳನ್ನು ಗಮನಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮಾನ್ಯತೆ ನೀಡಬೇಕು.
ಸರ್ಕಾರದಿಂದ ನಡೆಯುತ್ತಿರುವ ಎಲ್ಲ ಕಾಮಗಾರಿಗಳನ್ನು ಸಕಾಲದಲ್ಲಿ ಪೂರ್ಣಗೊಳಿಸಬೇಕು. ನರೇಗಾ ಯೋಜನೆಯಲ್ಲಿ ಅನುಷ್ಠಾನದಲ್ಲಿರುವ ಕಾಮಗಾರಿಗಳ ಬಗ್ಗೆ ಇಲಾಖೆ ಅಧಿಕಾರಿಗಳು ಗಮನಿಸಿ ಪೂರ್ಣಗೊಳಿಸಬೇಕು ಎಂದರು.
ತಾಪಂ ಇಒ ಉಮೇಶ್ ಮೈನಹಳ್ಳಿ ಮಾತನಾಡಿ, ತಾಲೂಕಿನ ಐತಿಹಾಸಿಕ ಕ್ಷೇತ್ರ ಮೈಲಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಅಧಿಕಾರಿಗಳು ಜಾತ್ರೆಯ ಮುಂಚಿತವಾಗಿಯೇ ಕಾಮಗಾರಿ ಪೂರ್ಣಗೊಳಿಸಬೇಕಿತ್ತು, ಇನ್ನೂ ಅದರ ಕಡೆ ಗಮನ ನೀಡುತ್ತಿಲ್ಲ.
ಬೇಗನೆ ರಸ್ತೆ ಕಾಮಗಾರಿ ಪೂರ್ಣಗೊಳಿಸಿ. ನೀರಾವರಿ ಇಲಾಖೆ ಅಧಿಕಾರಿಗಳು ಸಹಕರಿಸಿದರೆ ಕೆರೆಗಳಿಗೆ ನೀರು ತುಂಬಿಸುತ್ತಿರುವ ಕಾಲುವೆಗಳನ್ನು ನರೇಗಾ ಯೋಜನೆಯಡಿ ದುರಸ್ತಿಗೊಳಿಸಲಾಗುವುದು ಎಂದರು.
ಸಮಾಜ ಕಲ್ಯಾಣ ಇಲಾಕೆ ಸಹಾಯಕ ನಿರ್ದೇಶಕ ಆನಂದ ಡೊಳ್ಳಿನ, ಸಿಡಿಪಿಒ ರಾಮನಗೌಡ, ತಾಲೂಕು ವೈದ್ಯಾಧಿಕಾರಿ ಡಾ.ಸ್ವಪ್ನಾ ಕಟ್ಟಿ ಇತರರಿದ್ದರು.