

ಶಿರಸಿ: ಬಹುಕಾಲದಿಂದ ಬೇಡಿಕೆಯಲ್ಲಿದ್ದ ಭೈರುಂಬೆ ಹಾಗೂ ಹುಲೇಕಲ್ ಗ್ರಾಮ ಪಂಚಾಯಿತಿ ನಡುವಿನ ಅಡವಿಮನೆ ಹೊಳೆಗೆ ಸೇತುವೆ ಸಹಿತ ಬಾಂದಾರ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ನಬಾರ್ಡನ ಸೇತುವೆ - ಬಾಂದಾರ ಯೋಜನೆಯಲ್ಲಿ 1.50 ಕೋಟಿ ರೂ. ಮೊತ್ತದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಗುತ್ತಿಗೆದಾರರು ಒಂಬತ್ತು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣ ಮಾಡಲಿದ್ದಾರೆ. ಈ ಯೋಜನೆ ಜಾರಿಯಿಂದಾಗಿ 106 ಎಕರೆ ಕೃಷಿ ಪ್ರದೇಶಕ್ಕೆ ನೀರು ಸಿಗಲಿದೆ. 3.5 ಮೀಟರ್ ಎತ್ತರ ಹಾಗೂ 18.4 ಮೀಟರ್ ಎತ್ತರದಲ್ಲಿ ನಿರ್ವಿುಸಲಾಗುತ್ತಿರುವ ಈ ಬಾಂದಾರಿನಲ್ಲಿ ಐದು ಅಡಿ ಎತ್ತರದಲ್ಲಿ ನೀರು ನಿಲ್ಲಲಿದೆ ಎಂದರು.
ಅಡವಿಮನೆ ಸೇತುವೆ ನಿರ್ವಣದಿಂದ ನೀರ್ನಳ್ಳಿ, ಹಲಗೆ, ಗುಬ್ಬಿಗದ್ದೆ, ಕೊಪ್ಪ ಹಾಗೂ ಭೈರುಂಬೆ, ದೇವರಕೇರಿ, ತಾರಗೋಡ, ಕಡವೆ, ಬೊಮ್ಮನಳ್ಳಿಗೆ ಸಂಪರ್ಕಕ್ಕೆ ಅನುಕೂಲ ಆಗಲಿದೆ ಎಂದರು.
ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ, ಪಂಚಾಯಿತಿ ಅಧ್ಯಕ್ಷ ರಂಜಿತಾ ಗೌಡ, ಉಪಾಧ್ಯಕ್ಷ ರಾಘು ನಾಯ್ಕ, ಸದಸ್ಯ ಪ್ರಕಾಶ ಹೆಗಡೆ, ಘಟಕಾಧ್ಯಕ್ಷ ಜಿ.ಎಲ್.ಭಟ್ಟ, ಕೆ.ವಿ.ಹೆಗಡೆ, ಭೂತ್ ಅಧ್ಯಕ್ಷ ಮಂಜು ಪೂಜಾರಿ ಇದ್ದರು.