

ವಿಜಯವಾಣಿ ಸುದ್ದಿಜಾಲ ಧಾರವಾಡ
ಪಕ್ಷದ ವರಿಷ್ಠರ ನಿರ್ದೇಶನದಂತೆ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿರ್ ಪ್ರಲ್ಹಾದ ಜೋಶಿ ಅವರಿಗೆ ಜಿಲ್ಲೆಯ ಜೆಡಿಎಸ್ ಬೆಂಬಲ ಸೂಚಿಸಿದೆ. ಏ.15ರಂದು ಪ್ರಲ್ಹಾದ ಜೋಶಿ ನಾಮಪತ್ರ ಸಲ್ಲಿಸಲಿದ್ದು, ಪಕ್ಷದ ಎಲ್ಲ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿಗೆ ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ಗೆ ಬೆಂಬಲಿಸಿದ್ದರೆ, ಉಳಿದ ಕಡೆಗಳಲ್ಲಿ ಜೆಡಿಎಸ್ ಬಿಜೆಪಿಗೆ ಬೆಂಬಲಿಸಿದೆ. ಅದರಂತೆ ಧಾರವಾಡದಲ್ಲಿ ಬಿಜೆಪಿ ಅಭ್ಯಥಿರ್ ಜೋಶಿ ಪರ ಜೆಡಿಎಸ್ನ ಎಲ್ಲ ಟಕಗಳು ಕೆಲಸ ಮಾಡಲಿವೆ ಎಂದರು.
ರಾಜ್ಯದಿಂದ ಕೇಂದ್ರಕ್ಕೆ ಹೋಗಿರುವ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ವಾಪಸ್ಸು ನೀಡಿಲ್ಲ ಎಂದು ಕಾಂಗ್ರೆಸ್ ಯಾವ ಆಧಾರದ ಮೇಲೆ ಆರೋಪಿಸಿದೆ ತಿಳಿಯುತ್ತಿಲ್ಲ. ಈ ವಿಷಯದಲ್ಲಿ ಸುಳ್ಳು ಹೇಳಿದೆ. ಕಾಂಗ್ರೆಸ್ ಜತೆಗೆ ಸೇರಿದರೆ ರಾಜ್ಯದ ಅಭಿವೃದ್ಧಿ ಅಸಾಧ್ಯ ಎಂಬುದನ್ನು ಅರಿತೇ ನಮ್ಮ ವರಿಷ್ಠರು ಬಿಜೆಪಿ ಜತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದರು.
ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಮಾತನಾಡಿ, ಪ್ರಲ್ಹಾದ ಜೋಶಿ ಗೆಲುವು ನಿಶ್ಚಿತ. ಅದರಂತೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರದ ಗದ್ದುಗೆ ಏರುವ ಮೂಲಕ ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಾದಾಯಿ, ಆಲಮಟ್ಟಿ ಆಣೆಕಟ್ಟು ಎತ್ತರಿಸುವುದು ಸೇರಿ ರಾಜ್ಯದಲ್ಲಿ ಅನೇಕ ನೀರಾವರಿ ಯೋಜನೆಗಳನ್ನು ಜಾರಿಗೊಳಿಸುವುದು ಹಾಗೂ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂಬುದೇ ನಮ್ಮ ಆಗ್ರಹ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಕುರಿತು ಜೆಡಿಎಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ಬಿ. ಗಂಗಾಧರಮಠ ಮಾತನಾಡಿ, ಸ್ವಾಮೀಜಿ ಧರ್ಮದ ಕೆಲಸ ಮಾತ್ರ ಮಾಡುವುದು ಒಳಿತು. ಅವರ ಬಗ್ಗೆ ಭಕ್ತಿ ಇದೆ. ರಾಜಕೀಯ ಪ್ರವೇಶ ಮಾಡುವುದು ಬೇಡ ಎಂದರು.
ನವೀನಕುಮಾರ ಮಾರುತಿ, ಮಾರುತಿ ಹಿಂಡಸಗೇರಿ, ಮುಕ್ತುಂ ಹುಸೇನ, ಬಸವರಾಜ ಕುರಹಟ್ಟಿಮಠ, ಮೋಹನ ರಾಮದುರ್ಗ, ಇತರರು ಇದ್ದರು.