

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರಿಂದ ಅನುಮತಿ ಕೊಡಿಸಲು ಪ್ರಭಾವಿಗಳೇ ಕೆಲಸ ಮಾಡಿದ್ದಾರೆ. ಎಚ್.ಡಿ.ಕುಮಾರಸ್ವಾಮಿ, ಪ್ರಲ್ಹಾದ ಜೋಶಿ, ಬಿ.ವೈ.ವಿಜಯೇಂದ್ರ, ಆರ್.ಅಶೋಕ್ ಪ್ರಭಾವ ಬಳಸಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಸಿದ್ದರಾಮಯ್ಯ ಯಾವಾಗ 2ನೇ ಬಾರಿಗೆ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಬಿಜೆಪಿ ನಾಯಕರು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬ್ಲೂ ಪ್ರಿಂಟ್ ರೆಡಿ ಮಾಡಿದರು. ರಾಜಭವನವನ್ನು ಬಿಜೆಪಿ, ಜೆಡಿಎಸ್ ಪಕ್ಷದ ಕಚೇರಿ ಮಾಡಿಕೊಂಡಿರುವುದು ದುರ್ದೈವ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೇಸ್ ದಾಖಲು ಮಾಡಬೇಕು ಎಂದು ರಾಜ್ಯಪಾಲರಿಗೆ ಲೋಕಾಯುಕ್ತರು ದೂರು ಕೊಟ್ಟಿದ್ದಾರೆ. ಹೀಗಿದ್ದರೂ ರಾಜ್ಯಪಾಲರು ಅನುಮತಿ ನೀಡಿಲ್ಲ. ಬಿಜೆಪಿ ಮಾಜಿ ಸಚಿವರಾದ ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಆರೋಪ ಇದೆ. ಕಾನೂನು ಕ್ರಮ ಕೈಗೊಳ್ಳಲು ಅನುಮತಿ ಕೇಳಿದರೂ ರಾಜ್ಯಪಾಲರು ನೀಡಲು ಮುಂದಾಗಿಲ್ಲ ಎಂದು ಕಿಡಿಕಾರಿದರು.
ಸಿಎಂ ವಿರುದ್ಧ ಟಿ.ಜೆ.ಅಬ್ರಹಾಂ ದೂರು ಕೊಟ್ಟ ಕೆಲವೇ ಕ್ಷಣಗಳಲ್ಲಿ ಸಿಎಂಗೆ ನೋಟಿಸ್ ನೀಡಲಾಗುತ್ತದೆ. ಇದೀಗ ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಸಿಎಂ ವಿರುದ್ಧ ದೂರು ಕೊಟ್ಟೋರು ಯಾರು? ದಾರಿಯಲ್ಲಿ ಹೋಗೋರು ಕೊಟ್ಟ ದೂರನ್ನೂ ಮಾನ್ಯ ಮಾಡಲಾಗಿದೆ ಎಂದು ಹರಿಹಾಯ್ದರು.
ರಾಜ್ಯಪಾಲರು ಬಿಜೆಪಿ, ಜೆಡಿಎಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಟಾರ್ಗೆಟ್ ಮಾಡಲಿದ್ದಾರೆ. ಅಧಿಕಾರದ ದಾಹದಿಂದ ಈ ರೀತಿ ಮಾಡಲಾಗುತ್ತಿದೆ. ಬಿಜೆಪಿ, ಜೆಡಿಎಸ್ ಪಕ್ಷದ ಹುನ್ನಾರವನ್ನು ಜನ ಅರಿತುಕೊಳ್ಳಬೇಕು. ರಾಜ್ಯ ಸರ್ಕಾರ ಅಸ್ಥಿರಗೊಳಿಸಲಿಕ್ಕೆ ಇವುಗಳು ಮುಂದಾಗಿವೆ. ಆದರೆ, ಈ ಪಕ್ಷಗಳ ಹುನ್ನಾರ ಫಲಿಸಲ್ಲ ಎಂದರು.
ರಾಜ್ಯಪಾಲರ ಕ್ರಮವನ್ನು ಪಕ್ಷ ಪ್ರಬಲವಾಗಿ ವಿರೋಧಿಸುತ್ತದೆ. ರಾಜ್ಯಾದ್ಯಂತ ನಮ್ಮ ಪ್ರತಿಭಟನೆಗಳು ಪ್ರಾರಂಭವಾಗುತ್ತವೆ. ಆದರೆ, ಕೆಲವರು ಕಾಂಗ್ರೆಸ್ ಹೆಸರಿನಲ್ಲಿ ಪ್ರತಿಭಟನೆ ನಡೆಸಿ ಗೊಂದಲ ಸೃಷ್ಟಿಸಲು ಮುಂದಾಗಿದ್ದಾರೆ. ಇಂತಹ ಪ್ರತಿಭಟನೆಗಳಿಗೆ ಕಾಂಗ್ರೆಸ್ ಹೊಣೆಯಲ್ಲ ಎಂದು ಹೇಳಿದರು.