ಕಾಮಗಾರಿ ಅಪೂರ್ಣ: ಪ್ರತಿಭಟನೆಯ ಎಚ್ಚರಿಕೆ

ground
Published on

ಮಡಿಕೇರಿ: ಅಯ್ಯಂಗೇರಿ ಗ್ರಾಮದ ಸರಕಾರಿ ಶಾಲೆಯ ಮೈದಾನದ ಕಾಮಗಾರಿಯನ್ನು ತಕ್ಷಣ ಪೂರ್ಣಗೊಳಿಸದಿದ್ದಲ್ಲಿ ಭಾಗಮಂಡಲ-ಅಯ್ಯಂಗೇರಿ ರಸ್ತೆತಡೆ ಪ್ರತಿಭಟನೆ ನಡೆಸುವುದಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಅಯ್ಯಂಗೇರಿ ಶಾಖೆಯ ಅಧ್ಯಕ್ಷ ಉಸ್ಮಾನ್ ಎಚ್ಚರಿಕೆ ನೀಡಿದ್ದಾರೆ.

ಶಾಲಾ ಮೈದಾನದ ಕಾಮಗಾರಿ ಸ್ಥಗಿತಗೊಂಡು ಎರಡು ತಿಂಗಳುಗಳೇ ಕಳೆದಿದೆ. ಮಸೀದಿಗೆ ತೆರಳುವ ಮಾರ್ಗವೂ ಇಲ್ಲೇ ಇದ್ದು, ಪಾದಾಚಾರಿಗಳ ಸಂಚಾರಕ್ಕೆ ಅಡಚಣೆಯಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ಈ ಪ್ರದೇಶ ಸಂಪೂರ್ಣವಾಗಿ ದೂಳುಮಯವಾಗಿದೆ. ಶಾಲಾ ವಿದ್ಯಾರ್ಥಿಗಳು ದೂಳಿನ ವಾತಾವರಣ ಮತ್ತು ಮಣ್ಣಿನಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮುಂದಿನ ಏಳು ದಿನಗಳ ಒಳಗಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಯನ್ನು ಪೂರ್ಣಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ರಸ್ತೆತಡೆ ಪ್ರತಿಭಟನೆ ನಡೆಸುವುದು ಖಚಿತವೆಂದು ಉಸ್ಮಾನ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net