

ವಿಜಯವಾಣಿ ಸುದ್ದಿಜಾಲ ಧಾರವಾಡ
ಸ್ಥಳೀಯ ಮಟ್ಟದ ಅಧಿಕಾರಿಗಳು ನೀಡುವ ಪ್ರಗತಿ ವರದಿ ನೋಡಿ ಕೆಲಸ ಮಾಡದೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಪ್ರತಿವಾರ ತಪ್ಪದೇ ಕ್ಷೇತ್ರ ಭೇಟಿ ಮಾಡಿ ಸಮಸ್ಯೆ ಅರಿತು ಸ್ಥಳದಲ್ಲೇ ಜನರ ಜನರಿಗೆ ಪರಿಹಾರ ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ವಿವಿಧ ಇಲಾಖೆ ಅಧಿಕಾರಿಗಳ ಮತ್ತು ಇಲಾಖೆ ಕಾರ್ಯಕ್ರಮಗಳ ಪರಿಚಯಾತ್ಮಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆ ಅಭಿವೃದ್ಧಿಗೆ ಅಧಿಕಾರಿಗಳು ಸಹಕರಿಸಬೇಕು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ ಯಶಸ್ವಿಗೊಳಿಸಬೇಕು. ಹಿರಿಯ ಅಧಿಕಾರಿಗಳು ಕಚೇರಿಯಲ್ಲಿ ಕಾಲ ಕಳೆಯದೆ ಹಳ್ಳಿಗಳಿಗೆ ಭೇಟಿ ನೀಡಬೇಕು ಎಂದರು.
ಜಿಲ್ಲೆಯಲ್ಲಿ 388 ಗ್ರಾಮಗಳಿದ್ದು, ಇವುಗಳಲ್ಲಿ ಏಳು ತಾಲೂಕಿನ ಸುಮಾರು 77 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗುರುತಿಸಲಾಗಿದೆ. ಸಮಸ್ಯಾತ್ಮಕ ಗ್ರಾಮಗಳಲ್ಲಿ ಬಾಡಿಗೆ ಬೋರವೆಲ್ಗಳಿಂದ ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ನೀರಿನ ಸಮಸ್ಯೆ ಇರುವ ಗ್ರಾಮಗಳಲ್ಲಿ ಸರಿಯಾಗಿ ನೀರು ಸರಬರಾಜು ಮಾಡಲು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.
ಜಲಜೀವನ ಮಿಷನ್ ಕಾಮಗಾರಿಗಳು ತೃಪ್ತಿಕರವಾಗಿಲ್ಲ. ವಿಶೇಷವಾಗಿ ಗುತ್ತಿಗೆದಾರ ಪೈಪಲೈನ್ ಮಾಡಲು ರಸ್ತೆ ಅಗೆದು ಗುಂಡಿ ತೊಡಿದ್ದು, ಸರಿಯಾಗಿ ಮುಚ್ಚಿಲ್ಲ. ಈ ಕುರಿತು ಜನರಿಂದ ದೂರು ಬರುತ್ತಿವೆ. ರಸ್ತೆ ಗುಂಡಿ ಮುಚ್ಚಿದ ರಸ್ತೆ ನಿರ್ಮಿಸಿದ ನಂತರ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದು, ಕಾಮಗಾರಿ ಅನುಷ್ಠಾನದ ಬಗ್ಗೆ ಮುಂದಿನ ಸಭೆಯಲ್ಲಿ ತೃಪ್ತಿ ವ್ಯಕ್ತಪಡಿಸಿದ ಬಳಿಕ ಹಣ ಬಿಡುಗಡೆ ಮಾಡಬೇಕು ಎಂದು ಸಚಿವರು ಸೂಚಿಸಿದರು.
ಶಾಸಕರಾದ ಮಹೇಶ ಟೆಂಗಿನಕಾಯಿ, ಪ್ರಸಾದ ಅಬ್ಬಯ್ಯ, ಎನ್.ಎಚ್. ಕೋನರಡ್ಡಿ, ಎಂ.ಆರ್.ಪಾಟೀಲ ಮಾತನಾಡಿದರು. ಪೊಲೀಸ್ ಆಯುಕ್ತ ರಮಣ ಗುಪ್ತ, ಎಸ್ಪಿ ಲೋಕೇಶ ಜಗಲಾಸರ, ಪಾಲಿಕೆ ಆಯುಕ್ತ ಡಾ. ಗೋಪಾಲ ಕೃಷ್ಣ ಬಿ., ಉಪ ಪೊಲೀಸ ಆಯುಕ್ತರಾದ ರಾಜೀವ ಎಂ, ಡಾ.ಗೋಪಾಲ ಬ್ಯಾಕೂಡ, ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ, ಹುಡಾ ಆಯುಕ್ತ ಡಾ. ಸಂತೋಷ ಬಿರಾದಾರ, ಜಿಪಂ ಉಪಕಾರ್ಯದರ್ಶಿ ರೇಖಾ ಡೊಳ್ಳಿನವರ, ದೀಪಕ ಮಡಿವಾಳರ, ವಿವಿಧ ಇಲಾಖೆಗಳ ಅಧಿಕಾರಿಗಳು, ಇತರರು ಇದ್ದರು.