ಸಾರ್ವಜನಿಕರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡಿ

JANASAMPRKA ABHIYANA
Published on

ಯಲ್ಲಾಪುರ: ಪೊಲೀಸ್ ಇಲಾಖೆ ಕಾರ್ಯ ಎಂದರೆ ಜನರನ್ನು ಭಯ ಪಡಿಸುವುದಲ್ಲ. ಸಾರ್ವಜನಿಕರು ಮತ್ತು ಇಲಾಖೆಯು ಸಮನ್ವಯತೆಯಿಂದ ಸಮಾಜ ಘಾತುಕರನ್ನು ನಿಯಂತ್ರಿಸುವುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ತಾಲೂಕಿನ ಕಿರವತ್ತಿಯ ಸಭಾಭವನದಲ್ಲಿ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.

ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಈ ಪ್ರದೇಶದಲ್ಲಿ ನಿರಂತರ ಅನಧಿಕೃತವಾಗಿ ಕಿರಾಣಿ ಅಂಗಡಿಗಳಲ್ಲಿಯೂ ಸರಾಯಿ ವ್ಯಾಪಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಲ್ಲದೇ ಇಲ್ಲಿನ ಬಡವರಿಗೆ ಕಂದಾಯ ಮತ್ತು ಅರಣ್ಯಾಧಿಕಾರಿಗಳು ಯಾವುದೇ ರೀತಿಯ ತೊಂದರೆಗಳಾಗದಂತೆ ಕಾರ್ಯನಿರ್ವಹಿಸಬೇಕು. ಕೋಮು ಸೌಹಾರ್ದತೆಯಿಂದ ಎಲ್ಲರೂ ಜೀವನ ನಿರ್ವಹಿಸಬೇಕಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾತನಾಡಿ, ಕಿರವತ್ತಿಯ ಕಿರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶಾಸಕರು 16 ಸಿ.ಸಿ. ಕ್ಯಾಮೆರಾಕ್ಕೆ ಚಾಲನೆ ನೀಡಿದ್ದಾರೆ. ಯಾವುದೇ ಅಪರಾಧಿಕ ಚಟುವಟಿಕೆಯನ್ನು ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರು ಪೊಲೀಸರ ಜೊತೆ ಪ್ರೀತಿ, ಗೌರವದಿಂದ ನಡೆದುಕೊಳ್ಳುವಂತೆ ವಿನಂತಿಸಿದರು.

ಸಮಾಜಘಾತುಕ ವ್ಯಕ್ತಿಗಳನ್ನು ಮತ್ತು ಸೋಶಿಯಲ್ ಮೀಡಿಯಾದ ಮೂಲಕ ಕೋಮು ಘರ್ಷಣೆ, ತೇಜೋವಧೆ ಮಾಡುವಂತಹ ಬರಹಗಳನ್ನು ಗಮನಿಸುತ್ತಿದ್ದೇವೆ. ಅಂಥವ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಹಿಂಜರಿಯುವುದಿಲ್ಲ ಎಂದು ಎಸ್​ಪಿ ಎಚ್ಚರಿಸಿದರು.

ತಹಸೀಲ್ದಾರ್ ಯಲ್ಲಪ್ಪ ಗೋನೆಣ್ಣನವರ, ಕಿರವತ್ತಿ ಗ್ರಾ.ಪಂ.ಅಧ್ಯಕ್ಷೆ ಗೀತಾ ಕೊಕ್ರೆ, ಮದನೂರು ಗ್ರಾ.ಪಂ.ಅಧ್ಯಕ್ಷ ವಿಠ್ಠು ಶೆಳ್ಕೆ, ಡಿ.ವೈ.ಎಸ್.ಪಿ. ಗೀತಾ ಪಾಟೀಲ, ಸಿಪಿಐ ರಮೇಶ ಹಾನಾಪುರ ವಂದಿಸಿದರು. ಕೇಬಲ್ ನಾಗೇಶ, ರೇಖಾ ಎಂ.ಎಸ್. ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net