ಸಮನ್ವಯದಿಂದ ಕಾರ್ಯ ನಿರ್ವಹಿಸಿ

Uttara Kannada DC talking in Meeting
Published on

ಕುಮಟಾ: ಗುಡ್ಡ ಕುಸಿತ, ಅತಿವೃಷ್ಟಿ, ಪ್ರವಾಹ ಇನ್ನಿತರ ಪ್ರಕೃತಿ ವಿಕೋಪ ಮುಂಜಾಗ್ರತೆ ಕ್ರಮಗಳ ಕುರಿತು ಇಲ್ಲಿನ ತಾಪಂ ಸಭಾಭವನದಲ್ಲಿ ಸೋಮವಾರ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕರಾವಳಿ ತಾಲೂಕುಗಳ ಅಧಿಕಾರಿಗಳ ಸಭೆ ನಡೆಸಿದರು.

ಪ್ರಕೃತಿ ವಿಕೋಪ ಸಂಬಂಧಿಸಿ ಎಲ್ಲಿಯೇ ಸಮಸ್ಯೆಗಳಾದರೂ ಕಂದಾಯ, ಅರಣ್ಯ, ಗ್ರಾಮ ಪಂಚಾಯಿತಿ ಮೂರು ವಿಭಾಗದವರು ತೆರಳಿ ಸಮನ್ವಯತೆಯಿಂದ ಕೆಲಸ ಮಾಡಬೇಕು.

ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿದ್ದರೆ ಪರಸ್ಪರ ಪ್ರತಿಕ್ರಿಯಿಸಲು ತೊಂದರೆಯಾಗುತ್ತದೆ. ಈ ಬಗ್ಗೆ ಜಿಲ್ಲಾಮಟ್ಟದ ಅಧಿಕಾರಿ ಹೊಂದಾಣಿಕೆ ಖಚಿತಪಡಿಸಬೇಕು.

ಸಂಭವನೀಯ ಭೂಕುಸಿತ ಪ್ರದೇಶಗಳ ಬಗ್ಗೆ ನಿಯಮಿತವಾಗಿ ನೋಡಲ್ ಅಧಿಕಾರಿಗಳು ನಿಗಾ ವಹಿಸಬೇಕು ಎಂದರು.
ಸಂಭವನೀಯ ಪ್ರವಾಹ ಅಥವಾ ಅತಿವೃಷ್ಟಿಯ ಮುನ್ನೆಚ್ಚರಿಕೆ ಸಂದೇಶ ಬಂದಾಗ ಆಯಾ ಪಂಚಾಯಿತಿ ಮಟ್ಟದಲ್ಲಿ ಜನರನ್ನು ತಕ್ಷಣ ಜಾಗೃತಗೊಳಿಸುವ ಉದ್ದೇಶದಿಂದ ಪ್ರತಿಯೊಂದು ಮನೆಯಿಂದ ಒಂದೊಂದು ಫೋನ್ ಸಂಖ್ಯೆಯನ್ನು ನೋಡಲ್ ಅಧಿಕಾರಿ ದಾಖಲಿಸಿಕೊಂಡಿರಬೇಕು.

ತಂತ್ರಜ್ಞಾನದ ಬಳಕೆಯಿಂದ ನಾವು ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಜನರನ್ನು ಅಪಾಯಕ್ಕೆ ಮುಂಚೆ ಎಚ್ಚರಿಸುವ ವ್ಯವಸ್ಥೆಯನ್ನು ಮಾಡಿಕೊಂಡಿರಬೇಕು. ಸದಾ ಜನರ ಜತೆ ಸಂಪರ್ಕದಲ್ಲಿರಬೇಕು. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸುರಕ್ಷಿತತೆಗೆ ಕಾಳಜಿ ವಹಿಸಬೇಕು ಎಂದರು.

ತಹಸೀಲ್ದಾರರು ಅವರ ಹಂತದ ಸಭೆ ಮಾಡುವಾಗ ನೋಡಲ್ ಅಧಿಕಾರಿಗಳನ್ನು ಕರೆಯಬೇಕು. ಪ್ರತಿ ತಾಲೂಕಿನಲ್ಲಿ ಕಂಟ್ರೋಲ್ ರೂಮ್ ಮಾಡಲಾಗಿದೆಯೇ ಎಂದು ಪ್ರಶ್ನಿಸಿದ ಜಿಲ್ಲಾಧಿಕಾರಿಗಳು, ಭಟ್ಕಳದ ಕಂಟ್ರೋಲ್ ರೂಮ್ ಸಂಖ್ಯೆ ಪಡೆದು ಅಲ್ಲಿಂದಲೇ ಕರೆ ಮಾಡಿಸಿ ಪರಿಶೀಲಿಸಿದರು.

ಮೀನುಗಾರರ ನಿವಾಸದ ಪ್ರದೇಶಗಳಲ್ಲಿ ಕೊಂಡಿ ರಸ್ತೆ ಬಗ್ಗೆ ಮೀನುಗಾರ ಇಲಾಖೆ ಸಂಪೂರ್ಣ ನಿರ್ಲಕ್ಷ್ಯವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿ, ಶೀಘ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಮಳೆ ಹಾನಿ ಸಂಬಂಧಿಸಿ ಶಾಲೆ ಕೊಠಡಿಗಳ ಪೈಕಿ ಕಾರವಾರ 21, ಅಂಕೋಲಾ 19 ಕುಮಟಾ 16, ಹೊನ್ನಾವರ 2, ಭಟ್ಕಳ-1 ಸೇರಿ ಒಟ್ಟು 59 ಶಾಲೆಗಳ ಕೊಠಡಿ ದುರಸ್ತಿಗೆ 1.88 ಕೋಟಿ ರೂ. ಅಂದಾಜು ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಿಆರ್​ಇಡಿ ಅಧಿಕಾರಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಆಯಾ ತಾಲೂಕುಗಳ ಸಿಡಿಪಿಒ ಇಲ್ಲದಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ, 11 ತಾಲೂಕುಗಳಲ್ಲಿ 9 ರಲ್ಲಿ ಮೇಲ್ವಿಚಾರಕರಿಗೇ ಸಿಡಿಪಿಒ ಪ್ರಭಾರ ವಹಿಸಲಾಗಿದೆ. ಇಬ್ಬರು ಮಾತ್ರ ನಿಗದಿತ ಸಿಡಿಪಿಒ ಕರ್ತವ್ಯದಲ್ಲಿದ್ದಾರೆ.

ಯಾರೇ ಕರ್ತವ್ಯದಲ್ಲಿದ್ದರೂ ಇಂಥ ಸಭೆಗಳಿಗೆ ಹಾಜರಾಗಬೇಕು. ತಳಮಟ್ಟದಲ್ಲಿ ಸಮಸ್ಯೆಗಳನ್ನು ಅರಿಯಲು ಮತ್ತು ಬಗೆಹರಿಸಲು ಸಂಬಂಧಿತ ಎಲ್ಲ ಅಧಿಕಾರಿಗಳ ಹಾಜರಾತಿ ಅವಶ್ಯಕ ಎಂದರು.

ಮಳೆಗಾಲದ ಪ್ರವಾಹದ ಪರಿಸ್ಥಿತಿ ಹಿನ್ನೆಲೆಯಲ್ಲಿ ತುರ್ತು ಇದ್ದಾಗ ಅಧಿಕಾರಿಗಳು ಯಾವುದೇ ಕಾರಣಕ್ಕೂ ರಜೆ ಹೋಗಬಾರದು. ದೂರವಾಣಿಗೆ ಲಭ್ಯರಿರಬೇಕು. ಕಂಟ್ರೋಲ್ ರೂಮ್ಲ್ಲಿ ಯಾವುದೇ ಸಮಯದಲ್ಲಿ ಜನರ ಕರೆಗಳನ್ನು ಸ್ವೀಕರಿಸಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಕಟ್ಟುನಿಟ್ಟಾಗಿ ಸೂಚಿಸಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು, ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕು ಮಟ್ಟದ ಅಧಿಕಾರಿಗಳು, ನೋಡಲ್ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net