

ಮಾನ್ವಿ: ಹನ್ನೆರಡನೇ ಶತಮಾನದಲ್ಲಿ ಶರಣ ಹೂಗಾರ ಮಾದಯ್ಯ ಕಾಯಕ ಮತ್ತು ದಾಸೋಹಕ್ಕೆ ಮಹತ್ವ ನೀಡಿದ್ದರು ಎಂದು ಹೂಗಾರ ಸಮುದಾಯದ ಮುಖಂಡ ಸಂತೋಷ ಪೂಜಾರ ಹೂಗಾರ ಹೇಳಿದರು.
ಪಟ್ಟಣದಲ್ಲಿ ಹೂಗಾರ ಸಮುದಾಯದಿಂದ ಆಯೋಜಿಸಿದ್ದ ಕಾಯಕಯೋಗಿ ಹೂಗಾರ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ವಿಶ್ವಗುರು ಬಸವಣ್ಣ ಅವರ ನೇತೃತ್ವದಲ್ಲಿ ನಡೆದ ವಚನ ಚಳವಳಿಯಲ್ಲಿ ಹೂಗಾರ ಮಾದಯ್ಯ ಬಸವಣ್ಣ ಅವರ ಶಿಷ್ಯರಾಗಿ ಬಿಲ್ವಪತ್ರೆ, ಲಿಂಗಪೂಜೆ, ಶಿವಪೂಜೆಗೆ ಹೂ ಕಟ್ಟುವ ಕಾಯಕ ಮಾಡುತ್ತಿದ್ದರು. ಮಾದಯ್ಯ ಅನೇಕ ವಚನಗಳನ್ನು ರಚಿಸಿದ್ದಾರೆ ಎಂದರು.
ಹೂಗಾರ ಸಮುದಾಯದ ಪ್ರಮುಖರಾದ ಅಭಿಷೇಕ್, ಸಿದ್ದಪ್ಪ, ಶಂಕ್ರಪ್ಪ, ರವಿ ಗವಿಗಟ್ಟ, ಶರಣ ಮಲ್ಲಿನಮಡುಗು, ಅಮರೇಶ ನಂದಿಹಾಳ, ಚಂದ್ರು ಬ್ಯಾಗವಾಟ ಇತರರು ಇದ್ದರು.