

ಮುಂಡರಗಿ: ಕನ್ನಡ ಭಾಷೆ, ಸಾಹಿತ್ಯಕ್ಕೆ ಹೆಚ್ಚಿನ ಮಹತ್ವ ಮತ್ತು ಆದ್ಯತೆ ನೀಡಬೇಕು. ಕನ್ನಡ ಭಾಷೆ ಬಹಳ ಪ್ರಾಚೀನವಾದ ಭಾಷೆ. ಕನ್ನಡ ಸಾಹಿತ್ಯ ತನ್ನದೇ ಆದ ಇತಿಹಾಸ ಹೊಂದಿದೆ. ಪ್ರತಿಯೊಬ್ಬರು ಕನ್ನಡ ಭಾಷೆ ಮತ್ತು ಸಾಹಿತ್ಯ ಉಳಿವಿಗಾಗಿ ಶ್ರಮಿಸಬೇಕು ಎಂದು ಮಾಜಿ ಸೈನಿಕ ವೆಂಕಟೇಶ ಗುಗ್ಗರಿ ಹೇಳಿದರು.
ಪಟ್ಟಣದಲ್ಲಿ ತಾಲೂಕು ಕಸಾಪ ಮತ್ತು ಶಸಾಪ ಹಾಗೂ ಚೈತನ್ಯ ಶಿಕ್ಷಣ ಸಂಸ್ಥೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶರಣ ಚಿಂತನ ಮಾಲೆ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಪ್ರೌಢಶಾಲಾ ವಿಭಾಗದ ಬಿಆರ್ಪಿ ಹನುಮರಡ್ಡಿ ಇಟಗಿ ಮಾತನಾಡಿ, ದೇವರ ದಾಸಿಮಯ್ಯ ಅವರ ನಿರ್ಮಲ ಭಕ್ತಿ ಹಾಗೂ ಅನನ್ಯ ದಾಂಪತ್ಯ ಜೀವನ, ಕಾಯಕ ಮತ್ತು ದಾಸೋಹ ಇವುಗಳ ಮೂಲಕ ಶರಣರ ಪಂಕ್ತಿಯಲ್ಲಿಯೇ ಅಗ್ರಗಣ್ಯರಾಗಿದ್ದರು. ದಾಸಿಮಯ್ಯನವರು 150 ಕ್ಕೂ ಹೆಚ್ಚು ವಚನಗಳನ್ನು ರಚಿಸಿ ಸಮಾಜವನ್ನು ತಿದ್ದಿದಂಥ ಪುಣ್ಯಾತ್ಮರು. ಅವರ ಕಾಯಕ ನಿಷ್ಠೆ ಇತರರಿಗೆ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಚೈತನ್ಯ ಶಿಕ್ಷಣ ಸಂಸ್ಥೆ ನಿರ್ದೇಶಕಿ ವೀಣಾ ಪಾಟೀಲ ಮಾತನಾಡಿದರು. ಪೊ›. ಆರ್.ಎಲ್. ಪೋಲಿಸ ಪಾಟೀಲ, ಎಂ.ಜಿ. ಗಚ್ಚಣ್ಣವರ, ಹುಲಿಗೆಮ್ಮ ಭಜಂತ್ರಿ ಪ್ರಾರ್ಥಿಸಿದರು. ಮಂಜುನಾಥ ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಪಾಟೀಲ ನಿರೂಪಿಸಿದರು.