ಕಸಾಪ ಸದಸ್ಯತ್ವ ಹೆಚ್ಚಿಸಲು ಶ್ರಮವಹಿಸಿ: ಕೇಶವ ಕಾಮತ್

kasapa
Published on

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವ ಹೆಚ್ಚುಗೊಳಿಸುವ ಮೂಲಕ ಪರಿಷತ್ತನ್ನು ಗಟ್ಟಿಗೊಳಿಸಬೇಕಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮನವಿ ಮಾಡಿದರು.


ನಗರದಲ್ಲಿ ನಡೆದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈಗಾಗಲೇ ಕಾರ್ಯಕಾರಿ ಮಂಡಳಿಯ ಸದಸ್ಯರು, ತಾಲೂಕು ಅಧ್ಯಕ್ಷರು, ಹೋಬಳಿ ಅಧ್ಯಕ್ಷರು, ಶ್ರಮ ಪಡುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚು ಸದಸ್ಯತ್ವ ನೋಂದಾಯಿಸಲಾಗಿದೆ. ಪ್ರಸಕ್ತ ಸಾಲಿನ ಅಂತ್ಯದೊಳಗೆ ೧೦,೦೦೦ ಸದಸ್ಯರನ್ನು ಹೊಂದುವ ಗುರಿ ಹೊಂದಿದ್ದು ಎಲ್ಲರೂ ಸಹಕರಿಸಬೇಕು ಎಂದರು.


ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಪರಿಷತ್ತಿನ ಕಾರ್ಯಕಾರಿ ಮಂಡಳಿಯ ಎಲ್ಲಾ ಸದಸ್ಯರುಗಳು ಒಂದಾಗಿ ಎಲ್ಲಾ ಶಾಲೆ ಕಾಲೇಜುಗಳನ್ನು ಭೇಟಿಯಾಗಿ ಸದಸ್ಯತ್ವ ಅಭಿಯಾನದ ರೀತಿಯಲ್ಲಿ ತೊಡಗಿಸಿಕೊಂಡು ಕಾರ್ಯ ನಿರ್ವಹಿಸಬೇಕು. ಪರಿಷತ್ತಿನಲ್ಲಿ ವರ್ಷ ೩೫ ದತ್ತಿನಿಧಿ ಕಾರ್ಯಕ್ರಮಗಳಿದ್ದು, ಅವುಗಳನ್ನು ಶಾಲಾ ಕಾಲೇಜುಗಳಲ್ಲಿ ನಡೆಸುವ ಮೂಲಕ ಕನ್ನಡ ನಾಡು ನುಡಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸುವ ಕಾರ್ಯ ಆಗಬೇಕಾಗಿದೆ ಎಂದರು.


ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾರ್ಯಕಾರಿ ಸಮಿತಿಯ ಲೆಕ್ಕ ಪರಿಶೋಧನಾ ಸಲಹಾಕಾರ ಸಂಜೀವ್ ಜೋಶಿ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಸ್.ಐ.ಮುನಿರ್ ಅಹಮದ್, ರೇವತಿ ರಮೇಶ್, ಗೌರವಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ಆರ್.ಪಿ.ಚಂದ್ರಶೇಖರ್, ಜಲಜ ಶೇಖರ್, ಸಹ ಕಾರ್ಯದರ್ಶಿ ಎ.ವಿ.ಮಂಜುನಾಥ್, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ.ವಿಜೇತ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net