ನಾಡಿನ ಏಳಿಗೆಗೆ ಶ್ರಮವಹಿಸಿ ಕೆಲಸ ಮಾಡಿ

8
Published on

ಮೈಸೂರು: ಕರ್ನಾಟಕ ರಾಜ್ಯ ದೇಶಕ್ಕೇ ಮಾದರಿಯಾಗುವ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಬೇಕಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.

ನಗರದ ಧನ್ವಂತರಿ ರಸ್ತೆಯಲ್ಲಿರುವ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ನವೀಕೃತ ಕಟ್ಟಡವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಾಡಿನ ಅಭಿವೃದ್ಧಿ ನಮ್ಮೆಲ್ಲರ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ಸಮರ್ಪಿಸಬೇಕು. ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಕಾನೂನಿಗೆ ಗೌರವಿಸಿ ಜನಪರವಾಗಿ ಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಬಸವಣ್ಣನವರ ಕಾಲದಿಂದಲೂ ಪ್ರಜಾಪ್ರಭುತ್ವ ಜಾರಿಯಲ್ಲಿದೆ. ಜನರ ಭವಿಷ್ಯವನ್ನು ಉಜ್ವಗೊಳಿಸುವಲ್ಲಿ ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳ ಕರ್ತವ್ಯ ಮಹತ್ವದ್ದಾಗಿದೆ ಎಂದರು.

ಅಭಿವೃದ್ಧಿಯ ಕೇಂದ್ರ ಬಿಂದುವೇ ಸರ್ಕಾರಿ ನೌಕರರು. ಸರ್ಕಾರದ ಯೋಜನೆಗಳು ಪರಿಣಾಮಕಾರಿ ಯಾಗಿ ಜಾರಿಗೆ ತರುವಲ್ಲಿ ನೌಕರರ ಶ್ರಮ ಬಹಳಷ್ಟಿದೆ. ನೌಕರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಾಲಕಾಲಕ್ಕೆ ಸೂಕ್ತ ಪರಿಹಾರ ಮಾರ್ಗಗಳನ್ನು ಅನುಸರಿಸುತ್ತಿದೆ ಎಂದು ಡಾ. ಮಹದೇವಪ್ಪ ಹೇಳಿದರು.

ಹಿತ ಕಾಪಾಡಲು ಬದ್ಧ:
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ನಮ್ಮ ಸರ್ಕಾರ 7ನೇ ವೇತನ ಆಯೋಗ ಜಾರಿ ಮಾಡಿದೆ. ಸರ್ಕಾರಿ ನೌಕರರ ಹಿತ ಕಾಪಾಡುವಲ್ಲಿ ನಮ್ಮ ಸರ್ಕಾರಕ್ಕೆ ಬದ್ಧತೆ ಇದೆ. ಸಂಘಕ್ಕೆ ಅಗತ್ಯವಿರುವ ಎಲ್ಲ ರೀತಿಯ ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಶಾಸಕ ಶ್ರೀವತ್ಸ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಅಪರ ಜಿಲ್ಲಾಧಿಕಾರಿ ಪಿ.ಶಿವರಾಜು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಸಂಘದ ಉಪಾಧ್ಯಕ್ಷರು, ಪದಾಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net