ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಿ: ಜೆಡಿಎಸ್ ಮುಖಂಡ

20 rpt Chabu Sab
Published on

ರಿಪ್ಪನ್‌ಪೇಟೆ: ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಲು ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕು ಎಂದು ಜೆಡಿಎಸ್ ಮುಖಂಡ ಆರ್.ಎ.ಚಾಬುಸಾಬ್ ಹೇಳಿದರು.

ಶಿವಮೊಗ್ಗ ಕ್ಷೇತ್ರ ವ್ಯಾಪ್ತಿಯಲ್ಲಿ ಬಿ.ವೈ.ರಾಘವೇಂದ್ರ ಇಆಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಶಿವಮೊಗ್ಗದ ಸಮಗ್ರ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಜೆೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ರಾಘವೇಂದ್ರ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ಕೆಲಸ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಅವರು ಮಲೆನಾಡಿನ ಜ್ವಲಂತ ಸಮಸ್ಯೆಗಳನ್ನು ಅಧಿವೇಶನದಲ್ಲಿ ಚರ್ಚಿಸಿ ಪರಿಹಾರ ಒದಗಿಸುವಲ್ಲಿ ಸಫಲರಾಗಿದ್ದಾರೆ. ಎಲ್ಲ ಸಮಾಜದವರಿಗೂ ಆದ್ಯತೆ ನೀಡಿ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿ ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ ಮತ ನೀಡುವಂತೆ ಸೂಚಿಸಿದ್ದಾರೆ ಎಂದರು.
ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರಿಗೆ ನ್ಯಾಯ ಕೊಡಿಸಲು ಸಾಧ್ಯವಿಲ್ಲ. ತ್ರಿವಳಿ ತಲಾಖ್ ರದ್ದುಗೊಳಿಸಿರುವುದು ಸಾಮಾಜಿಕ ಪಿಡುಗು ತೊಲಗಿಸಿದಂತಾಗಿದೆ. ಸುಸಂಸ್ಕೃತ ಸಮಾಜ ನಿರ್ಮಿಸುವ ಕಲ್ಪನೆ ಹೊಂದಿರುವ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ಮಾಡಲು ಅಲ್ಪಸಂಖ್ಯಾತರು ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಅವರಿಗೆ ಮತ ನೀಡಬೇಕು ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಎಚ್.ಕೆ.ಅಬ್ದುಲ್ ವಾಜೀದ್ ಮಾತನಾಡಿ, ಸಂಸದ ಬಿ.ವೈ.ರಾಘವೇಂದ್ರ ಅವರು ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರಿಗಿಂತಲೂ ಹೆಚ್ಚು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಲ್ಪಸಂಖ್ಯಾತರೂ ಬಿಜೆಪಿಗೆ ಮತ ನೀಡಲು ತೀರ್ಮಾನಿಸಿದ್ದಾರೆ. 2 ಲಕ್ಷಕ್ಕೂ ಅಧಿಕ ಮತಗಳಿಂದ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net