ಸಹಕಾರ ಸಂಘದ ಬೆಳವಣಿಗೆಗೆ ಶ್ರಮಿಸಿ

30-pnp 1
ಪಾಂಡವಪುರ ತಾಲೂಕು ಕೆಂಪೇಗೌಡರ ಪತ್ತಿನ ಸಹಕಾರ ಸಂಘದ ಪದಾಧಿಕಾರಿಗಳನ್ನು ಸಂಘದ ಅಧ್ಯಕ್ಷೆ ಯನುನಾ ಅಭಿನಂದಿಸಿದರು. ರಾಮಕೃಷ್ಣೇಗೌಡ, ಚಲುವೇಗೌಡ ಇತರರು ಇದ್ದರು.
Published on

ಪಾಂಡವಪುರ: ನಾಲ್ಕು ವರ್ಷಗಳ ಹಿಂದೆ ಸಹಕಾರ ಸಂಘ ಸ್ಥಾಪನೆಗೆ ತೀರ್ಮಾನಿಸಿ ನಿರಂತರ ಶ್ರಮದಿಂದಾಗಿ ಕೆಂಪೇಗೌಡರ ಪತ್ತಿನ ಸಹಕಾರ ಸಂಘದ ಸ್ಥಾಪನೆಗೆ ನಾಂದಿ ಹಾಡಲಾಯಿತು ಎಂದು ಒಕ್ಕಲಿಗರ ವಿಕಾಸ ವೇದಿಕೆ ಅಧ್ಯಕ್ಷೆ ಯಮುನಾ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಹಕಾರ ಸಂಘದ ನೂತನ ತಾಲೂಕು ಪದಾಧಿಕಾರಿಗಳನ್ನು ಅಭಿನಂದಿಸಿ ಮಾತನಾಡಿ, ಸಂಘದ ಆಡಳಿತ ಮಂಡಳಿ ಸದಸ್ಯರು ಪರಸ್ಪರ ಸಹಕಾರದಿಂದ ಸಂಘದ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕೆಂಪೇಗೌಡ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣೇಗೌಡ, ಸಂಘದ ಸದಸ್ಯರು ಹೆಚ್ಚು ಹೆಚ್ಚು ಷೇರುಗಳನ್ನು ಮಾಡಿಸುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು. ಸಂಘವನ್ನು ಕೆಂಪೇಗೌಡರ ಹೆಸರಿಗೆ ಸೀಮಿತಗೊಳಿಸದೆ ಹತ್ತು-ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಸಂಘದ ಉನ್ನತಿಗೆ ಶ್ರಮಿಸಬೇಕು. ಮಂಡ್ಯ ಜಿಲ್ಲೆಯಲ್ಲಿಯೇ ಪಾಂಡವಪುರ ತಾಲೂಕಿನಲ್ಲಿ ಪ್ರಥಮವಾಗಿ ಕೆಂಪೇಗೌಡ ಸಹಕಾರ ಸಂಘ ಸ್ಥಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸಂಘದ ಮೂಲಕ ಜನಾಂಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಹಾಗೂ ಸರಳ ವಿವಾಹಕ್ಕೆ ಪ್ರೋತ್ಸಾಹಿಸುವುದಾಗಿ ತಿಳಿಸಿದರು.

ಸಂಘದ ಮಾರ್ಗದರ್ಶಕರಾದ ನಿವೃತ್ತ ಉಪನ್ಯಾಸಕ ಎನ್.ಚಲುವೇಗೌಡ ಮಾತನಾಡಿ, ಸಂಘಟನೆ ಮಾಡುವುದು ಬಹಳ ಕಷ್ಟದ ಕೆಲಸ. ಪರಿಶ್ರಮ ಅತಿ ಮುಖ್ಯವಾಗಿ ಬೇಕು. ಪಾಂಡವಪುರದಲ್ಲಿ ನೂರಾರು ಸಂಘಗಳಿವೆ. ಆದರೆ ಅವುಗಳಲ್ಲಿ ಕೆಲವೇ ಕೆಲವು ಸಂಘಗಳು ಉಸಿರಾಡುತ್ತಿವೆ. ಅದರಲ್ಲಿ ಕೆಂಪೇಗೌಡ ಪತ್ತಿನ ಸಹಕಾರ ಕೂಡ ಪ್ರಮುಖವಾಗಿ ಉಸಿರಾಡಬೇಕು. ಸಂಘ ಬೆಳೆದರೆ ಹಲವರಿಗೆ ಸಹಾಯ ಮಾಡಲು ಸಾಧ್ಯ. ಜತೆಗೆ ನಮ್ಮಲ್ಲೂ ಬಹಳಷ್ಟು ದಾನಿಗಳಿದ್ದಾರೆ. ಅವರನ್ನು ಬೆನ್ನತ್ತಿದ್ದರೆ ಸಹಕಾರ ಪಡೆಯಬಹುದು ಎಂದರು.

ಸಂಘದ ನೂತನ ಉಪಾಧ್ಯಕ್ಷ ನೀಲನಹಳ್ಳಿ ಬಾಜೇಗೌಡ, ನಿರ್ದೇಶಕರಾದ ಶಂಕನಹಳ್ಳಿ ಕುಮಾರ್, ಡಾಮಡಹಳ್ಳಿ ಸೌಭಾಗ್ಯಾ, ಪಾಂಡವಪುರ ಬಿ.ಕೆ.ರೂಪಾ, ಚಿನಕುರಳಿ ನರಸಿಂಹೇಗೌಡ, ತಾಳಶಾಸನ ವೀರಭದ್ರಸ್ವಾಮಿ, ಕೆನ್ನಾಳು ಮಹೇಶ್, ಅರಳಕುಪ್ಪೆ ಇಂದಿರೇಶ್, ಕನಗನಮರಡಿ ಎ.ನಾಗರಾಜು, ಕೋಡಾಲ ಕೆ.ಎಚ್.ರಾಜೇಗೌಡ, ಶ್ಯಾದನಹಳ್ಳಿ ವಿಶ್ವೇಶ್ವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net