

ವೀರಯ್ಯಸ್ವಾಮಿ ಚೌಕೀಮಠ ಬ್ಯಾಡಗಿ
ತಾಲೂಕಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಇಲ್ಲದೆ ರೈತರು ಪರಿತಪಿಸುವಂತಾಗಿದೆ. ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡದ ಪರಿಣಾಮ ಇರುವ ವೈದ್ಯರಿಗೆ ‘ಕಾರ್ಯಭಾರ’ ಹೆಚ್ಚಳವಾಗಿ ಸಮರ್ಪಕ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ.
ತಾಲೂಕಿನಲ್ಲಿ ಒಟ್ಟು 16 ಪಶು ಆಸ್ಪತ್ರೆಗಳಿದ್ದು, ಈ ಪೈಕಿ 10 ಆಸ್ಪತ್ರೆಗಳಲ್ಲಿ ಪಶು ಪರೀಕ್ಷಕರಿಲ್ಲ, 8 ಆಸ್ಪತ್ರೆಗಳಲ್ಲಿ ಪಶು ವೈದ್ಯರಿಲ್ಲ, ಇನ್ನುಳಿದಂತೆ ಮಂಜೂರಾದ ಹುದ್ದೆಗಳ ಪೈಕಿ ಶೇ. 70ರಷ್ಟು ಹುದ್ದೆಗಳು ಖಾಲಿ ಇವೆ!
ತಾಲೂಕು ಮಟ್ಟದ ಆಸ್ಪತ್ರೆಯಲ್ಲಿ ಮುಖ್ಯ ಪಶುವೈದ್ಯರಿಲ್ಲವಾಗಿದ್ದು, ಮಂಜೂರಾದ ಎರಡು ಹುದ್ದೆಗಳು ಖಾಲಿ ಇವೆ. ಮೋಟೆಬೆನ್ನೂರು, ಮುತ್ತೂರು, ಹೆಡಿಗ್ಗೊಂಡ, ಮಲ್ಲೂರು, ಕಾಗಿನೆಲೆ, ಶಿಡೇನೂರು, ಸೇರಿ 8 ಆಸ್ಪತ್ರೆಗಳಲ್ಲಿ ವೈದ್ಯರು, 10 ಕಡೆ ಪಶು ಪರೀಕ್ಷಕರ ಕೊರತೆ ಇದೆ. ಹೀಗಾಗಿ ಒಬ್ಬ ವೈದ್ಯರು 2-3 ಆಸ್ಪತ್ರೆ ವ್ಯಾಪ್ತಿಯ 10-12 ಗ್ರಾಮಗಳಲ್ಲಿ ಓಡಾಡಬೇಕಿದೆ. ಹಗಲು-ರಾತ್ರಿ ಎನ್ನದೆ ವೈದ್ಯರು ರೈತರು ಕರೆದ ಕಡೆಗೆ ತೆರಳಬೇಕಿರುವುದರಿಂದ ವಾರಕ್ಕೊಂದು ದಿನ ರಜೆಯೂ ಸಿಗದಂತಾಗಿದೆ.
ಕೆಲ ವೈದ್ಯರು ಬ್ಯಾಡಗಿಯಲ್ಲಿ ವಾಸ ಮಾಡುತ್ತಿದ್ದು, ಕರ್ತವ್ಯ ಮುಗಿಸಿಕೊಂಡು ರಾತ್ರಿ ಮನೆ ಸೇರುತ್ತಿದ್ದಂತೆ ಫೋನ್ ಕರೆಗಳು ಬರಲು ಶುರು ಆಗುತ್ತವೆ. ಆದರೆ ವೈದ್ಯರು, ಪರೀಕ್ಷಕರು, ಸಿಬ್ಬಂದಿ ಕೊರತೆಯಿಂದ ಸಮಸ್ಯೆ ಜಟಿಲವಾಗುತ್ತಿದೆ. ಈ ಕುರಿತು ಸಾಕಷ್ಟು ಬಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪರಿಹಾರ ಮಾತ್ರ ಶೂನ್ಯವಾಗಿದೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಜಾರಿಗೊಳಿಸಿದ 108 ಮಾದರಿಯ ಪಶುಗಳ ಆರೋಗ್ಯ ಕಾಪಾಡುವ, ಮನೆಮನೆಗೂ ದಿನದ 24 ತಾಸು ಪಶುಗಳಿಗೆ ಚಿಕಿತ್ಸೆ ಒದಗಿಸುವ ಉದ್ದೇಶದ ಸಂಚಾರಿ ಆಸ್ಪತ್ರೆ ಹೆಸರಿನ ವಾಹನದ ಕತೆಯೂ ಹೀಗೆಯೇ ಆಗಿದೆ. ಇಲ್ಲಿ ಒಬ್ಬ ಪಶುಪರೀಕ್ಷಕ, ಸಿಬ್ಬಂದಿ, ಪಶುವೈದ್ಯರು ಕಾರ್ಯನಿರ್ವಹಿಸಬೇಕಿದೆ. ಆದರೆ, ವಾಹನ ಆರಂಭವಾಗಿ ನಾಲ್ಕೈದು ವರ್ಷ ಗತಿಸಿದರೂ ವೈದ್ಯರ ನೇಮಕವಿಲ್ಲದೆ, ಹಾಲಿ ಇರುವ ವೈದ್ಯರನ್ನೆ ಆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ.
ಕಳೆದ ವರ್ಷ ರಾಜ್ಯಾದ್ಯಂತ ಚರ್ಮಗಂಟು ರೋಗ ಹರಡಿ ರೈತರಲ್ಲಿ ತೀವ್ರ ಭಯ ಹುಟ್ಟಿಸಿತ್ತು. ಆಗ ತಾಲೂಕಿನಲ್ಲಿ 400ಕ್ಕೂ ಹೆಚ್ಚು ಜಾನುವಾರುಗಳಲ್ಲಿ ರೋಗ ಕಾಣಿಸಿಕೊಂಡಿತ್ತು. ಕೆಲ ಜಾನುವಾರುಗಳು ಮೃತಪಟ್ಟ ಘಟನೆ ನಡೆದು, ರೈತ ವಲಯದಲ್ಲಿ ತೀವ್ರ ಕಳವಳ ಉಂಟುಮಾಡಿತ್ತು. ರೈತರು ಪಶು ವೈದ್ಯರ ಸೇವೆಗಾಗಿ ಪ್ರತಿಭಟನೆ ನಡೆಸಿದ್ದರು. ಪ್ರತಿಯಾಗಿ ಅವರಿಗೆ ಸಿಕ್ಕಿದ್ದು ಭರವಸೆ ಮಾತ್ರ.
ಪಶು ಆಸ್ಪತ್ರೆಗಳಲ್ಲಿ ಮುಖ್ಯ ಪಶು ಪರೀಕ್ಷಕರು ಹಾಗೂ ಮುಖ್ಯ ವೈದ್ಯರ ಕೊರತೆಯಿದೆ. ಈ ಕುರಿತು ನಾವು ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಕಳುಹಿಸುತ್ತಿದ್ದೇವೆ. ಶಾಸಕರ ಗಮನಕ್ಕೂ ತಂದಿದ್ದೇವೆ. ಪಶು ವೈದ್ಯರು, ಪರೀಕ್ಷಕರು, ಸಿಬ್ಬಂದಿ ನೇಮಕ ತುರ್ತು ಅಗತ್ಯವಿದೆ. ಆದರೆ, ರೈತರ ತೊಂದರೆ ತಪ್ಪಿಸಲು ಅನಿವಾರ್ಯವಾಗಿ ಹಾಲಿ ಇರುವ ವೈದ್ಯರನ್ನೇ ಬೇರೆ ಆಸ್ಪತ್ರೆಗಳಿಗೆ ನಿಯೋಜಿಸಿದ್ದೇವೆ. ಲಸಿಕೆ, ರೋಗಗಳ ಉಲ್ಬಣವಾದಲ್ಲಿ ತೀವ್ರ ತೊಂದರೆಯಾಗುತ್ತದೆ. ಜಿಲ್ಲಾಧಿಕಾರಿಯವರು ತುರ್ತು ಪಶುವೈದ್ಯರನ್ನು ನೇಮಿಸಿದಲ್ಲಿ ಅನುಕೂಲವಾಗಲಿದೆ. | ಡಾ. ಎನ್.ಎಸ್. ಚೌಡಾಳ, ಬ್ಯಾಡಗಿ ತಾಲೂಕು ಪಶು ಆಸ್ಪತ್ರೆ ಆಡಳಿತಾಧಿಕಾರಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮದು ರೈತಪರ ಆಡಳಿತ ಎನ್ನುವ ಘೊಷಣೆಯೊಂದಿಗೆ ರೈತರ ಹಿತಕಾಯುವ ಭರವಸೆ ನೀಡುತ್ತಿವೆ. ಹತ್ತಾರು ವರ್ಷಗಳಿಂದ ಖಾಲಿಯರುವ ಪಶು ಆಸ್ಪತ್ರೆಗಳ ವೈದ್ಯ, ಸಿಬ್ಬಂದಿ ನೇಮಿಸಲು ನಿರ್ಲಕ್ಷ್ಯತೋರಿಸುತ್ತಿದ್ದು, ಜಾನುವಾರುಗಳ ಚಿಕಿತ್ಸೆಗೆ ಸಮರ್ಪಕ ವ್ಯವಸ್ಥೆ ಮಾಡುತ್ತಿಲ್ಲ. ಕೂಡಲೇ ತಾತ್ಕಾಲಿಕವಾಗಿ ವೈದ್ಯ, ಸಿಬ್ಬಂದಿ ನೇಮಿಸದಿದ್ದಲ್ಲಿ ಸತ್ಯಾಗ್ರಹ ಹಮ್ಮಿಕೊಳ್ಳಬೇಕಾಗುತ್ತದೆ. | ಶಿವಯೋಗಿ ಗಡಾದ, ರೈತ ಮುಖಂಡ