ಮಿದುಳು ಆರೋಗ್ಯ... ಜೀವನದ ಸೌಭಾಗ್ಯ...

Brain-1
Published on

ನರಮಂಡಲಗಳ ಆಜ್ಞಾ ಕೇಂದ್ರ

ಇರಬೇಕು ಎಂದಿಗೂ ಸುಭದ್ರ

ಪ್ರಶಾಂತ ಭಾಗ್ವತ, ಉಡುಪಿ

ನಿತ್ಯದ ಜೀವನದಲ್ಲಿ ಉತ್ತಮ ನಿರ್ಧಾರ ತೆಗೆದುಕೊಳ್ಳುವ, ಎಲ್ಲೆಡೆ ಗಮನ ಹರಿಸುವ ಮತ್ತು ಇತರರೊಂದಿಗೆ ಸಂವಹನ ಮಾಡುವ ಕಾರ್ಯವನ್ನು ದೇಹದ ಪ್ರಮುಖ ಅಂಗ ಮಿದುಳು ನಿರ್ವಹಿಸುತ್ತದೆ. ಹೀಗಾಗಿ ಮಿದುಳಿನ ಆರೋಗ್ಯ ಉತ್ತಮವಾಗಿ ಇರಬೇಕಾಗುತ್ತದೆ.

Brain-2
ಉತ್ತಮವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಮಿದುಳಿಗೆ ಇದ್ದರೆ ಅದು ಜೀವನದ ಸೌಭಾಗ್ಯವೇ ಸರಿ. ಆದರೆ, ಸಮಗ್ರತೆ, ಮಾನಸಿಕ ಮತ್ತು ಅರಿವಿನ ಸಾಮರ್ಥ್ಯ ಕಳೆದುಕೊಂಡರೆ ವ್ಯಕ್ತಿ ಬದುಕಿದ್ದೂ ಸತ್ತಂತೆ.

ನರಮಂಡಲದ ಆಜ್ಞೆಯ ಕೇಂದ್ರ

ಮಿದುಳು ಮಾನವನ ನರಮಂಡಲದ ಆಜ್ಞಾ ಕೇಂದ್ರವಾಗಿದೆ. ಇದು ಜೈವಿಕ ವಿಕಾಸದ ಅತ್ಯುನ್ನತ ಅಂಗವಾಗಿದೆ. ಸಂಕೀರ್ಣ ಕಾರ್ಯ, ಆಲೋಚನೆ, ಸ್ಮರಣೆ, ಚಲನೆ ಮತ್ತು ಭಾವನೆಗಳನ್ನು ಇದು ಸಕ್ರಿಯಗೊಳಿಸುತ್ತದೆ. ಜೀವನದಲ್ಲಿ ಮಿದುಳಿನ ಆರೋಗ್ಯ ಕಾಪಾಡಿಕೊಂಡರೆ ದೇಹದ ಒಟ್ಟು ಆರೋಗ್ಯದೊಂದಿಗೆ ಮತ್ತು ದೀರ್ಘಾಯುಷಿಯೂ ಆಗಬಹುದಾಗಿದೆ. ಆದರೆ, ವಯಸ್ಸಾದಂತೆ ನರಗಳ ಅಸ್ವಸ್ಥತೆ, ಒತ್ತಡಗಳ ಹೊರೆಯಿಂದಾಗಿ ಮಿದುಳು ಆರೋಗ್ಯದ ಸಂರಕ್ಷಣೆ ಸವಾಲಾಗಿ ಪರಿಣಮಿಸುತ್ತದೆ.

Brain-3

 ಸಾವಿನ 2ನೇ ಕಾರಣ

ಮಿದುಳಿನ ಆರೋಗ್ಯ ಎಂದರೇನು? ಅದು ಏಕೆ ಮುಖ್ಯ ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲದಿದ್ದಲ್ಲಿ ಬದುಕು ನರಕಸದೃಷವಾಗಲಿದೆ. ವಿಶ್ವಾದ್ಯಂತ ಜನರ ಸಾವಿಗೆ ಮಿದುಳಿನ ಪಾರ್ಶ್ವವಾಯು ಎರಡನೇ ಪ್ರಮುಖ ಕಾರಣವಾಗಿದೆ. ಅಲ್ಲದೆ, ಅಂಗವೈಕಲ್ಯಕ್ಕೆ ಮೂರನೇ ಪ್ರಮುಖ ಕಾರಣವಾಗಿದೆ. ಪ್ರತಿವರ್ಷ ಸುಮಾರು 18 ಲಕ್ಷ ಜನರು ಸ್ಟ್ರೋಕ್ ನಿಂದ ಬಳಲುತ್ತಿದ್ದಾರೆ. ಭಾರತದಲ್ಲಿ ಸರಾಸರಿ ಪ್ರಮಾಣ ಒಂದು ಲಕ್ಷ ಜನಸಂಖ್ಯೆಯಲ್ಲಿ 145 ಜನರನ್ನು ಕಾಡುತ್ತಿದೆ. ಸಂಶೋಧಕರ ಪ್ರಕಾರ, ಪ್ರತಿ ನಿಮಿಷಕ್ಕೆ ಮೂವರು ಭಾರತೀಯರು ಪಾರ್ಶ್ವವಾಯುವಿಗೆ ಒಳಗಾಗುತ್ತಾರೆ.

ಜಿಲ್ಲಾಸ್ಪತ್ರೆಗಳಲ್ಲಿ ಬ್ರೈನ್ ಹೆಲ್ತ್​ ಕ್ಲಿನಿಕ್​

ಮಿದುಳು ಆರೋಗ್ಯ ರಕ್ಷಣೆಗಾಗಿ ಇದೀಗ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಬ್ರೈನ್​ ಹೆಲ್ತ್​ ಕ್ಲಿನಿಕ್​ ತೆರೆಯಲಾಗಿದೆ. ನಿಮ್ಹಾನ್ಸ್​ ಮತ್ತು ಕರ್ನಾಟಕ ಸರ್ಕಾರದ ಆಯೋಜನೆಯಲ್ಲಿ 2024ರ ಜನವರಿಯಿಂದಲೇ ಈ ಕ್ಲಿನಿಕ್​ ಆರಂಭಗೊಂಡಿದೆ. ಈ ಘಟಕದಲ್ಲಿ ಜಿಲ್ಲಾ ಸಂಯೋಜಕರು, ನರ್ಸಿಂಗ್​ ಆಫೀಸರ್​, ಸೈಕಾಲಾಜಿಸ್ಟ್​, ಫಿಸಿಯೋಥೆರಪಿಸ್ಟ್​, ಸ್ಪೀಚ್​ ಥೆರಪಿಸ್ಟ್​ ಇರುತ್ತಾರೆ. ವಾರಕ್ಕೊಮ್ಮೊ ಓರ್ವ ನರರೋಗ ತಜ್ಞರು (ಖಾಸಗಿ) ಬೆಳಗ್ಗೆ 9ರಿಂದ ಸಂಜೆ 4ರ ವರೆಗೆ ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರಲಿದ್ದು, ಅಗತ್ಯವುಳ್ಳವರಿಗೆ ಉಚಿತ ಚಿಕಿತ್ಸೆಯೂ ಸಿಗಲಿದೆ.

Brain-6
ಉಡುಪಿ ಜಿಲ್ಲಾಸ್ಪತ್ರೆಯಲ್ಲಿರುವ ಬ್ರೈನ್ ಹೆಲ್ತ್ ಕ್ಲಿನಿಕ್.

ಕಾಡುವ 4 ಪ್ರಕಾರದ ಪ್ರಮುಖ ಕಾಯಿಲೆ

ಮಿದುಳಿನ ಆರೋಗ್ಯವನ್ನು ಪ್ರಮುಖವಾಗಿ 4 ಕಾಯಿಲೆಗಳು ಕಾಡುತ್ತವೆ. ಡಿಮೆನ್ಷಿಯ ಎಂಬ ಕಾಯಿಲೆ ಮಿದುಳಿಗೆ ಬಲುಬೇಗ ತಗುಲುತ್ತದೆ. ಇದು ಸ್ಮರಣ ಶಕ್ತಿ ನಾಶಗೊಳಿಸಿ, ಪ್ರತಿದಿನದ ಕೆಲಸಕ್ಕೆ ತೊಡಕುಂಟಾಗುತ್ತದೆ. 2ನೇಯದು ಪಾರ್ಶ್ವವಾಯು. ಮಿದುಳಿಗೆ ಕಡಿಮೆ ಆಮ್ಲಜನಕ ಪೂರೈಕೆಯಾದಾಗ ಈ ರೋಗ ಬರುತ್ತದೆ. ಅಧಿಕ ರಕ್ತದ ಒತ್ತಡ, ಮಧುಮೇಹ, ಬೊಜ್ಜು, ಉದ್ವೇಗ ಮತ್ತು ಅಧಿಕ ಕೊಲೆಸ್ಟ್ರಾಲ್​, ಹೃದಯ ಸಂಬಂಧಿತ ಕಾಯಿಲೆ, ಮದ್ಯಪಾನ/ಧೂಮಪಾನದಿಂದ ಪಾರ್ಶ್ವವಾಯು ಉಂಟಾಗುತ್ತದೆ. 3ನೇಯದು ಅಪಸ್ಮಾರ (ಫಿಟ್ಸ್​). ಮಿದುಳಿನ ಅಸ್ವಸ್ಥತೆಯಿಂದ ಎರಡು ಅಥವಾ ಹೆಚ್ಚು ಬಾರಿ ಮೂರ್ಛೆ ಹೋದರೆ ಅದನ್ನು ಅಪಸ್ಮಾರ ಎನ್ನುತ್ತಾರೆ. ಪಾರ್ಶ್ವವಾಯು, ಮಿದುಳಿನಲ್ಲಿ ಸೋಂಕು ಅಥವಾ ಗಡ್ಡೆ ಬೆಳೆಯುವಿಕೆ, ತಲೆಗೆ ತೀವ್ರ ಪೆಟ್ಟು ಬಿದ್ದರೆ ಫಿಟ್ಸ್​ ಬರುತ್ತದೆ. 4ನೇಯದು ತಲೆ ಅಥವಾ ಕುತ್ತಿಗೆ ಭಾಗದಲ್ಲಿ ಕಂಡು ಬರುವ ತಲೆನೋವು. ಮೈಗ್ರೇನ್​, ಉದ್ವೇಗದಿಂದ ಬರುವ ತಲೆನೋವು, ಕ್ಲಸ್ಟರ್​ ತಲೆನೋವು, ದೈನಂದಿನ ತಲೆನೋವು, ಸೈನುಸೈಟೀಸ್​ ಮತ್ತು ಬಿಪಿಯಿಂದ ತಲೆನೋವು ಬರುತ್ತದೆ. ಒತ್ತಡ, ಆತಂಕ, ನಿದ್ರೆ ಕೊರತೆ, ಹೆಚ್ಚು ಸಮಯ ಬಿಸಿಲಲ್ಲಿರುವುದು, ಹವಾಮಾನ ಬದಲಾವಣೆ, ಅತಿಯಾಗಿ ಕಾಫಿ, ಮದ್ಯಪಾನ, ಧೂಮಪಾನದಿಂದಲೂ ತಲೆನೋವು ಬರುತ್ತದೆ.

ಚಿಕಿತ್ಸೆಗಳ ಜಾಗೃತಿ ಮೂಡಿಸುವ ದಿನ

Brain-4
ಪ್ರತಿವರ್ಷ ಅ. 29ರಂದು 'ವಿಶ್ವ ಪಾರ್ಶ್ವವಾಯು ದಿನ' (ಡಬ್ಲ್ಯುಎಸ್​ಡಿ) ಆಚರಿಸಲಾಗುತ್ತದೆ. ಗಂಭೀರ ಸ್ವರೂಪದ ಮತ್ತು ಹೆಚ್ಚಿನ ಪ್ರಮಾಣದ ಪಾರ್ಶ್ವವಾಯು ತಡೆಗಟ್ಟುವಿಕೆ ಮತ್ತು ಚಿಕಿತ್ಸೆಗಳ ಕುರಿತು ಜಾಗೃತಿ ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತದೆ. ಕೆನಡಾದ ವ್ಯಾಂಕೋವರ್​ನಲ್ಲಿರುವ ವರ್ಲ್ಡ್​ ಸ್ಟ್ರೋಕ್​ ಕಾಂಗ್ರೆಸ್​ನಲ್ಲಿ 2004ರ ಅ.29ರಂದು ಆರಂಭಿಸಲಾಯಿತು. ಬಳಿಕ 2006ರಿಂದ ವರ್ಲ್ಡ್​ ಸ್ಟ್ರೋಕ್​ ಫೆಡರೇಷನ್​ ಮತ್ತು ಇಂಟರ್​ನ್ಯಾಷನಲ್​ ಸ್ಟ್ರೋಕ್​ ಸೊಸೈಟಿಯ ವಿಲೀನದೊಂದಿಗೆ ವಿಶ್ವ ಸ್ಟ್ರೋಕ್​ ಸಂಸ್ಥೆ (ಡಬ್ಲ್ಯುಎಸ್​ಒ) ರಚಿಸಲಾಯಿತು. ಇದು ವಿಶ್ವದ ವಿವಿಧ ವೇದಿಕೆಗಳಲ್ಲಿ ಈ ದಿನವನ್ನು ನಿರ್ವಹಿಸುತ್ತಲಿದೆ. 2024ರ ವಿಶ್ವ ಸ್ಟ್ರೋಕ್​ ದಿನದ ಘೋಷಣೆ 'ಗ್ರೇಟರ್​ ದೇನ್​ ಸ್ಟ್ರೋಕ್​ ಆ್ಯಕ್ಟಿವ್​ ಚಾಲೆಂಜ್​' ಎಂಬುದಾಗಿದೆ.

ವಯಸ್ಸಾದವರು ಸಾಮಾನ್ಯವಾಗಿ ಮಿದುಳು ಸ್ಟ್ರೋಕ್​ಗೆ ಒಳಗಾಗುತ್ತಾರೆ. ಇದು ಯಾವುದೇ ವಯಸ್ಸಿನವರಲ್ಲೂ ಸಂಭವಿಸಬಹುದು. ಅಪಾಯಕಾರಿ ಅಂಶ ಮತ್ತು ರೋಗಲಕ್ಷಣ ಗುರುತಿಸಿದರೆ ಮಿದುಳು ಸ್ಟ್ರೋಕ್​ ತಡೆಯಲು ಸಹಾಯ ಮಾಡುತ್ತದೆ. ಆರಂಭದ ಹಂತದಲ್ಲಿಯೇ ರೋಗ ಪತ್ತೆ ಮತ್ತು ಚಿಕಿತ್ಸೆ ದೊರೆತರೆ ಸಂಪೂರ್ಣ ಚೇತರಿಕೆಯ ಸಾಧ್ಯತೆ ಹೆಚ್ಚಿರುತ್ತದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ಗುರುವಾರ ಮಿದುಳು ಆರೋಗ್ಯಕ್ಕೆ ಸಂಬಂಧಿಸಿ ಉಚಿತ ಚಿಕಿತ್ಸೆ ಸೌಲಭ್ಯವಿದೆ. | ಡಾ. ಎಚ್​.ಅಶೋಕ್​. ಜಿಲ್ಲಾ ಸರ್ಜನ್​, ಉಡುಪಿ ಜಿಲ್ಲಾಸ್ಪತ್ರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net