

ಮಂಗಳೂರು: ಲಾರಿ, ಟ್ರಕ್ಗಳಲ್ಲಿ ಓವರ್ಲೋಡ್ಗೆ ಸರ್ಕಾರ ಅಧೀನದ ಸಂಸ್ಥೆಗಳೂ ಕಾರಣವಾಗಿವೆ. ಭ್ರಷ್ಟಾಚಾರಿ ಸಾರಿಗೆ, ಪೊಲೀಸ್ ಇಲಾಖೆಗಳಿಂದಾಗಿ ಇದು ನಡೆಯುತ್ತಿದೆ. ಸೆಪ್ಟೆಂಬರ್ 1ರಿಂದ ಇಂತಹ ಯಾವುದೇ ಓವರ್ಲೋಡ್ ಸೂಚನೆಯನ್ನು ಪರಿಗಣಿಸುವುದಿಲ್ಲ ಎಂದು ಕರ್ನಾಟಕ ಲಾರಿ ಮಾಲೀಕರು, ಏಜೆಂಟ್ಗಳ ಒಕ್ಕೂಟದ ಅಧ್ಯಕ್ಷ ಷಣ್ಮುಗಪ್ಪ ಹೇಳಿದ್ದಾರೆ. ನವಮಂಗಳೂರು ಬಂದರು ಮಂಡಳಿಯಿಂದಲೇ ಹೊರಡುವ ಟ್ರಕ್ಗಳಲ್ಲಿ ಟನ್ಗಟ್ಟಲೆ ಓವರ್ಲೋಡ್ ಮಾಡಲಾಗುತ್ತಿದೆ. ಇದನ್ನು ನಿಷೇಧಿಸುವಂತೆ ಜಿಲ್ಲಾಡಳಿತ, ಸಾರಿಗೆ ಇಲಾಖೆಗೂ ವಿನಂತಿಸ ಲಾಗಿದೆ. ಓವರ್ಲೋಡ್ನಿಂದಾಗಿ ರಸ್ತೆ ಕೆಡುತ್ತದೆ, ಅಲ್ಲದೆ ಎಲ್ಲ ಲಾರಿ ಮಾಲೀಕರಿಗೆ ಅವಕಾಶಗಳು ಸಿಗುತ್ತಿಲ್ಲ. ಭ್ರಷ್ಟಾಚಾರ ನಿಲ್ಲಬೇಕು, ಓವರ್ಲೋಡ್ ಕೂಡ ನಿಲ್ಲಬೇಕು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
ಉತ್ತರ ಪ್ರದೇಶ, ಮಧ್ಯಪ್ರದೇಶ ಮುಂತಾದೆಡೆ ಟ್ರಕ್ಗಳ ಓವರ್ಲೋಡ್ನಿಂದ ರಸ್ತೆ ಹಾಳಾದರೆ ಕೇಸ್ ಹಾಕುತ್ತಾರೆ, ಅದು ನಮ್ಮಲ್ಲೂ ನಡೆಯಲಿ. ಹೊರರಾಜ್ಯ ದಿಂದ ಬರುವ ಟ್ರಕ್ಗಳು ಸಾರಿಗೆ ನಿಯಮ ಪ್ರಕಾರ, ಇಲ್ಲಿ ಸರಕು ಸಾಗಾಟ ಮಾಡುವಂತಿಲ್ಲ. ಆದರೆ ನಿಯಮ ಉಲ್ಲಂಘನೆ ಆಗುತ್ತಿದ್ದು, ಇದನ್ನೂ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ನಯಾರಾ ಫ್ಯುಯಲ್ಸ್ ಹಾಗೂ ರಿಲಯನ್ಸ್ ಕಂಪನಿಯವರು ಜಿಲ್ಲೆಯ 1000ಕ್ಕೂ ಅಧಿಕ ಟ್ಯಾಂಕರ್ಗಳನ್ನು ಕಡೆಗಣಿಸಿ ಹೊರರಾಜ್ಯದ, ಹೊರಜಿಲ್ಲೆಯ ಟ್ಯಾಂಕರ್ನವರಿಗೆ ಮಣೆ ಹಾಕುವುದು ಸರಿಯಲ್ಲ, ನಮ್ಮೆಲ್ಲ ಬೇಡಿಕೆಗಳನ್ನೂ ಸರ್ಕಾರದ ಮುಂದೆ ಇರಿಸಿದ್ದೇವೆ, 15 ದಿನಗಳ ಗಡುವನ್ನೂ ನೀಡಿದ್ದೇವೆ. ಆ.18ರಂದು ರಾಜ್ಯಮಟ್ಟದ ಸಭೆಯಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದರು.
ಏಕಮಾದರಿ ದರ: 2015ರಲ್ಲಿ -ಠಿ;52 ಇದ್ದ ಡೀಸೆಲ್ ದರ ಈಗ -ಠಿ;96 ತಲುಪಿದೆ. ವಿಮೆ, ಬಿಡಿಭಾಗಗಳ ದರ ಏರಿದೆ. ಆದರೂ ಕಾರ್ಯಾಚರಣೆಗೆ ಸಿದ್ಧರಿದ್ದೇವೆ. ಏಕಮಾದರಿ ದರ ನಿಗದಿಪಡಿಸಲು ಅವಕಾಶ ನೀಡಬೇಕೆಂಬುದು ನಮ್ಮ ಬೇಡಿಕೆ ಎಂದು ದ.ಕ ಟ್ರಕ್ ಓನರ್ಸ್ ಅಸೋಸಿಯೇಶನ್ ಅಧ್ಯಕ್ಷ ಸುನೀಲ್ ಡಿ’ಸೋಜ ಹೇಳಿದರು.
ಗುಜರಿ ನೀತಿಗೆ ವಿರೋಧ: ಕೇಂದ್ರ ಸರ್ಕಾರ 15 ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಹಾಕಬೇಕೆಂಬ ನೀತಿ ತರುತ್ತಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಷಣ್ಮುಗಪ್ಪ, ಬೇಕಾದರೆ 8 ವರ್ಷಕ್ಕೊಮ್ಮೆ ಇಂಜಿನ್ ಬದಲಾಯಿಸುವ ನೀತಿ ತರಲಿ. ಅದು ಬಿಟ್ಟು ಇಡೀ ವಾಹನ ಗುಜರಿಗೆ ಹಾಕಿದರೆ ನಾವು 30-40 ಲಕ್ಷ ರೂ. ಕೊಟ್ಟು ಟ್ರಕ್ ಖರೀದಿಸಿದವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದರು.