

ರಾಮನಗರ: ವಂಡರ್ ಲಾ ವತಿಯಿಂದ 4 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ನಗರದ ಮಿನಿ ವಿಧಾನಸೌಧ ಆವರಣದಲ್ಲಿ ಗುರುವಾರ ಭೂಮಿಪೂಜೆ ನೆರವೇರಿಸಲಾಯಿತು.
ಈ ವೇಳೆ ಮಾತನಾಡಿದ ತಾಪಂ ಅಧ್ಯಕ್ಷ ಗಾಣಕಲ್ ನಟರಾಜು, ತಾಲೂಕಿನ ವಿವಿಧೆಡೆಯಿಂದ ಪ್ರತಿನಿತ್ಯ 2 ಸಾವಿರಕ್ಕೂ ಹೆಚ್ಚು ಮಂದಿ ಮಿನಿ ವಿಧಾನಸೌಧಕ್ಕೆ ಭೇಟಿ ನೀಡುತ್ತಾರೆ. ಇವರಿಗೆ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಈ ಬಗ್ಗೆ ತಾಲೂಕು ಪಂಚಾಯಿತಿಯಿಂದ ವಂಡರ್‌ಲಾ ಆಡಳಿತ ಮಂಡಳಿಗೆ ಶುದ್ಧ ನೀರಿನ ಘಟಕ ನಿರ್ಮಿಸಿಕೊಡುವಂತೆ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿರುವ ಆಡಳಿತ ಮಂಡಳಿ ನೀರಿನ ಘಟಕ ಆರಂಭಕ್ಕೆ ಅಗತ್ಯ ಹಣ ಬಿಡುಗಡೆ ಮಾಡಿದೆ ಎಂದರು.
ಹದಿನೈದು ದಿನಗಳೊಳಗೆ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯಾರಂಭ ಮಾಡಲಿದೆ. ಒಂದು ರೂ.ಗೆ 1 ಲೀಟರ್ ಮತ್ತು 5 ರೂಪಾಯಿಗೆ 25 ಲೀಟರ್ ಶುದ್ಧ ನೀರು ಪೂರೈಕೆ ಮಾಡಲಾಗುತ್ತದೆ. ಜತೆಗೆ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಉಚಿತವಾಗಿ ಕುಡಿಯುವ ನೀರು ನೀಡಲಾಗುತ್ತದೆ ಎಂದರು.
ಮಿನಿ ವಿಧಾನಸೌಧದಲ್ಲಿ ಶೌಚಗೃಹದ ಕೊರತೆ ಇದ್ದು, ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ನಿರ್ಮಾಣ ಮಾಡಿಕೊಡುವಂತೆ ಎಂಎಲ್ಸಿ ಸಿ.ಎಂ. ಲಿಂಗಪ್ಪ ಅವರಿಗೆ ಗಾಣಕಲ್ ನಟರಾಜು ಮನವಿ ಮಾಡಿದರು. ಸದರಿ ಘಟಕದಲ್ಲಿ ಸಾವಿರ ಲೀಟರ್ ನೀರಿಗೆ 300 ಲೀಟರ್ ಮಾತ್ರ ಶುದ್ಧ ಕುಡಿಯುವ ನೀರು ಲಭ್ಯವಾಗುತ್ತದೆ. ಉಳಿದ 700 ಲೀಟರ್ ನೀರು ವ್ಯರ್ಥವಾಗದಂತೆ ತಡೆಯಲು ಸ್ಥಳದಲ್ಲೇ ತೊಟ್ಟಿ ನಿರ್ಮಾಣ ಮಾಡಲಾಗುತ್ತದೆ. ಇದರ ನೀರನ್ನು ಮಿನಿ ವಿಧಾನಸೌಧದ ಆವರಣದಲ್ಲಿ ಗಿಡ ಬೆಳೆಸಲು ಮತ್ತು ಶೌಚಗೃಹ ನಿರ್ಮಾಣವಾದ ನಂತರ ಅದರ ಬಳಕೆಗೆ ನೀಡಲಾಗತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಸಿ.ಎಂ. ಲಿಂಗಪ್ಪ, ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ, ವಂಡರ್‌ಲಾ ಸಂಸ್ಥೆಯ ಕಿಶೋರ್, ಮಹೇಶ್, ತಾಪಂ ಸದಸ್ಯ ರೇಣುಕಪ್ಪ, ರೈತ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು.