ಕಾಲೇಜಿಗೆ ಸಾರ್ವಜನಿಕ ಉದ್ದಿಮೆಗಳ ಸದನ ಸಮಿತಿ ಭೇಟಿ, ನಿರ್ವಹಣೆಯ ಕಾಮಗಾರಿ ಪರಿಶೀಲನೆ

13CBP4
Published on

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಶಾಸಕ ತನ್ವೀರ್ ಸೇಠ್ ಅಧ್ಯಕ್ಷತೆಯ ರಾಜ್ಯ ಸಾರ್ವಜನಿಕ ಉದ್ದಿಮೆಗಳ ಸದನ ಸಮಿತಿಯು ಭೇಟಿ ನೀಡಿ, ಗುಣಮಟ್ಟ ಮತ್ತು ನಿರ್ವಹಣೆಯ ಕಾಮಗಾರಿಯನ್ನು ಪರಿಶೀಲಿಸಿತು.

ತಂಡದಲ್ಲಿ ಸಮಿತಿ ಸದಸ್ಯರೂ ಆಗಿರುವ ಶಾಸಕರಾದ ಬಸವರಾಜ ಪಾಟೀಲ ಯತ್ನಾಳ್, ಎ.ಆರ್.ಕೃಷ್ಣಮೂರ್ತಿ, ಯು.ಬಿ.ಬಣಕಾರ್, ಹನುಮಂತ ನಿರಾಣಿ, ಡಿ.ಜಿ.ಶಾಂತನಗೌಡರ್, ವೆಂಕಟಶಿವಾರೆಡ್ಡಿ ಇದ್ದು ಕೆಆರ್‌ಐಡಿಎಲ್ 6.80 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿರುವ ಕಟ್ಟಡವನ್ನು ವೀಕ್ಷಿಸಿತು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳೇ ಹೆಚ್ಚಿಗೆ ಓದುವ ಕಾಲೇಜಿನಲ್ಲಿ ಮೂಲ ಸೌಕರ್ಯಗಳ ಕೊರತೆ ಕಾಡಬಾರದು. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತು. ಕಾಲೇಜು ಕಾಮಗಾರಿ ಪ್ರಾರಂಭ, ಅನುದಾನ ಬಿಡುಗಡೆಯಲ್ಲಿ ವಿಳಂಬ, ನಂತರದಲ್ಲಿ ನಡೆದ ಬೆಳವಣಿಗೆಯ ವಿಚಾರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಮಿತಿಗೆ ಮಾಹಿತಿ ನೀಡಿದರು.

ಕಾಲೇಜಿನಲ್ಲಿ 560 ವಿದ್ಯಾರ್ಥಿಗಳು ಓದುತ್ತಿದ್ದು ಬಿಎ, ಬಿಕಾಂ, ಬಿಬಿಎ ಮತ್ತು ಬಿಸಿಎ ಕೋರ್ಸುಗಳ ಬೋಧನೆಗೆ 12 ಕೊಠಡಿಗಳನ್ನು ಮೀಸಲಿಟ್ಟಿದ್ದು ಇನ್ನು 6 ಕೊಠಡಿಗಳ ಅವಶ್ಯಕತೆ ಇದೆ. ಮುಂಬರುವ ದಿನಗಳಲ್ಲಿ ವಿಜ್ಞಾನ ವಿಭಾಗ ಸ್ನಾತಕೋತ್ತರ ವಿಭಾಗ ತೆರೆಯುವ ಸಲುವಾಗಿ 20 ಹೆಚ್ಚುವರಿ ಕೊಠಡಿಗಳು, 5 ಪ್ರಯೋಗಾಲಯ ಕೊಠಡಿಗಳನ್ನು ನಿರ್ಮಿಸಬೇಕಾಗಿದೆ. ತಡೆಗೋಡೆ ಕಾಮಗಾರಿ ಪೂರ್ಣಗೊಳಿಸಬೇಕಾಗಿದೆ. ಶುದ್ಧಕುಡಿಯುವ ನೀರಿನ ಘಟಕ ಬೇಕಿದೆ ಎಂಬುದಾಗಿ ಪ್ರಾಂಶುಪಾಲ ಪ್ರೊ.ಜಿ.ಡಿ.ಚಂದ್ರಯ್ಯ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಅಶ್ವಿನ್, ಕೆಆರ್‌ಐಡಿಎಲ್ ಎಇಇ ಅಮೂಲ್ಯ, ತಹಶೀಲ್ದಾರ್ ಅನಿಲ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net