

ವಿಜಯಪುರ : ಇಲ್ಲಿನ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿಯಿಂದ ಭಕ್ತ ಕನಕದಾಸರ ಜಯಂತಿ ಆಚರಿಸದ ಹಿನ್ನೆಲೆ ವಿವಿಧ ಸಂಟನೆಗಳ ಪದಾಧಿಕಾರಿಗಳು ಸೋಮವಾರ ವಿವಿಯ ಆಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ನ.18ರಂದು ರಾಜ್ಯಾದ್ಯಂತ ಕನಕರ ಜಯಂತಿಯನ್ನು ಕಡ್ಡಾಯವಾಗಿ ಆಚರಿಸಬೇಕೆಂಬ ಸರ್ಕಾರದ ಆದೇಶವಿದ್ದರೂ, ಮಹಿಳಾ ವಿವಿಯ ಆಡಳಿತ ಮಂಡಳಿ ಸರ್ಕಾರದ ಆದೇಶ ಪಾಲಿಸಿಲ್ಲ ಎಂದು ಆರೋಪಿಸಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಫೌಂಡೇಶನ್ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಕುರುಬ ಸಮಾಜದ ಮುಖಂಡರು ಬೃಹತ್ ಪ್ರತಿಭಟನೆ ನಡೆಸಿದರು.
ಮುಖಂಡ ಮೋಹನ ದಳವಾಯಿ ಮಾತನಾಡಿ, ಭಕ್ತ ಕನಕದಾಸರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಬೇಕಿದ್ದ ವಿವಿ ಕುಲಪತಿ, ಕುಲಸಚಿವರು ಹಾಗೂ ಮೌಲ್ಯಮಾಪನ ಕುಲಸಚಿವರು ಕಾರ್ಯಕ್ರಮಕ್ಕೆ ಗೈರು ಉಳಿಯುವ ಮೂಲಕ ಕನಕದಾಸರಿಗೆ ಅವಮಾನ ಮಾಡಿದ್ದಾರೆ. ಆ ಮೂಲಕ ಇಡೀ ಕುರುಬ ಸಮಾಜವನ್ನು ಹಗುರವಾಗಿ ಕಂಡಿದ್ದಾರೆ. ಜಯಂತಿಗೆ ಗೈರು ಉಳಿದಿದ್ದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಖಂಡ ಶಿವಕುಮಾರ ಬಣ್ಣೂರ ಮಾತನಾಡಿ, ಮಹಾನ್ ಪುರುಷರ ಜಯಂತಿಗೆ ಅವಮಾನ ಮಾಡಿದ ಅಧಿಕಾರಿಗಳ ನಡೆ ಅಕ್ಷಮ್ಯ ಅಪರಾಧ. ಮುಂದಿನ ದಿನಗಳಲ್ಲಿ ಕನಕದಾಸರ ಜಯಂತಿ ಸೇರಿ ಮಹಾನ್ ವ್ಯಕ್ತಿಗಳ ಜಯಂತಿಯನ್ನು ಕಡೆಗಣಿಸಿದರೆ, ನಾವು ಸುಮ್ಮನೆ ಕೂಡಲ್ಲ ಎಂದರು.
ಚನ್ನಪ್ಪ ಸೈದಾಪುರ, ಕನಕದಾಸ ಬೀರಣ್ಣವರ, ಸಚಿನ ದಳವಾಯಿ, ಸಂಗಮೇಶ ಕವಡಿಮಟ್ಟಿ, ಉಮೇಶ ಬೆಂಕಿ, ರವಿ ಕಿತ್ತೂರ, ಮಲ್ಲು ದಿನ್ನಿ, ಮೋಹನ ಮೇಟಿ, ಯಲ್ಲಾಲಿಂಗ ಗಣಿ, ಔದುಸಿದ್ದ ಒಡೆಯರ, ಬಂಗಾರೆಪ್ಪ ಒಡೆಯರ, ಲಕ್ಕು ಹಳ್ಳಿ, ಶ್ರೀಕಾಂತ ತೊರವಿ, ರೇವಣಸಿದ್ದ ತೊರವಿ ಮತ್ತಿತರರಿದ್ದರು.