ಮಹಿಳಾ ವಿವಿಗೂ ಬಂತು ‘ಎಐ’ ತಂತ್ರಜ್ಞಾನ

ai TECHNOLOGY
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿಯ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರು ಎಐ ತಂತ್ರಜ್ಞಾನ ಬಳಸಿ ಸಿದ್ಧಪಡಿಸಿದ ವರದಿ.
Published on

ವಿಜಯಪುರ: ಮಾಧ್ಯಮ ಲೋಕದಲ್ಲಿ ತೀವ್ರ ಸಂಚಲನ ಮೂಡಿಸುತ್ತಿರುವ ‘ಕೃತಕ ಬುದ್ದಿ ಮತ್ತೆ (ಎಐ)’ ತಂತ್ರಜ್ಞಾನ ಇದೀಗ ಅಕ್ಕಮಹಾದೇವಿ ಮಹಿಳಾ ವಿವಿಗೂ ಕಾಲಿಟ್ಟಿದ್ದು, ಇಲ್ಲಿನ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿನಿಯರು ಪ್ರಾಯೋಗಿಕವಾಗಿ ಸುದ್ದಿ ನಿರೂಪಿಸಿ ಪ್ರಸಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ‘ಎಐ ನ್ಯೂಸ್ ಆಂಕರ್’ಗಳನ್ನು ಬಳಸಿ ಸುದ್ದಿವಾಹಿನಿಗಳು ಸುದ್ದಿ ಪ್ರಸಾರ ಮಾಡಿ ಗಮನ ಸೆಳೆದಿವೆ. ಇದೀಗ ಪತ್ರಿಕೋದ್ಯಮ ವಿದ್ಯಾರ್ಥಿನಿಯರು ಕಲಿಕೆ ದೃಷ್ಠಿಯಿಂದ ಇಂಥದ್ದೊಂದು ಪ್ರಯೋಗಕ್ಕೆ ಮುಂದಾಗಿದ್ದು, ಯಶಸ್ವಿಯಾಗಿ ವರದಿ ಪ್ರಸಾರ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರಗೌಡ ಕಾಕಡೆ ಅವರ ಸಲಹೆ ಮತ್ತು ಮಾರ್ಗದರ್ಶನದ ಮೇರೆಗೆ ವಿದ್ಯಾರ್ಥಿನಿಯರು ಈ ವರದಿ ಸಿದ್ಧಪಡಿಸಿ ಪ್ರಸಾರಗೊಳಿಸಿದ್ದಾರೆ.

ಹೀಗಿತ್ತು ತಯಾರಿ

ನಾಲ್ಕು ಹಂತಗಳಲ್ಲಿ ವಿದ್ಯಾರ್ಥಿನಿಯರು ಈ ವರದಿ ಸಿದ್ಧಪಡಿಸಿದ್ದು, ಮೊದಲ ಹಂತದಲ್ಲಿ ಸಾಂಪ್ರದಾಯಿಕವಾಗಿ ಸ್ಕ್ರಿಪ್ಟ್ ರಚಿಸಿದ್ದಾರೆ. ಬಳಿಕ ಕ್ಯಾಂಪಸ್‌ನಲ್ಲಿಯೇ ದೃಶ್ಯಾವಳಿ ಸೆರೆ ಹಿಡಿದಿದ್ದಾರೆ. ಎರಡನೇ ಹಂತದಲ್ಲಿ ‘ಎಐ’ ತಂತ್ರಜ್ಞಾನ ಬಳಸಿ ಸ್ಕ್ರಿಪ್ಟ್‌ಗೆ ಧ್ವನಿ ನೀಡಿದ್ದಾರೆ. ಮೂರನೇ ಹಂತದಲ್ಲಿ ‘ಎಐ’ ಮೂಲಕ ಮುದ್ರಿಸಿದ ಧ್ವನಿಗೆ ಮತ್ತೊಂದು ‘ಎಐ’ ವೆಬ್‌ಸೈಟ್ ಸಹಾಯದಿಂದ ‘ನ್ಯೂಸ್ ಆಂಕರ್ ಪಾರ್ಟ್’ ಸಿದ್ಧಪಡಿಸಲಾಗಿದೆ. ಅಂತಿಮವಾಗಿ ನ್ಯೂಸ್ ಆಂಕರ್, ವಿಡಿಯೋ ಫುಟೇಜ್, ಗ್ರಾಫಿಕ್ಸ್ ಹಾಗೂ ಹಿನ್ನೆಲೆ ಸಂಗೀತ ಸೇರಿಸಿ ಸಂಕಲನ ಮಾಡಿದ್ದು, ಅದ್ಭುತವಾಗಿ ಮೂಡಿಬಂದಿದೆ. ವರದಿಯನ್ನು ವಿವಿಯ ಅಕ್ಕ ಯೂಟ್ಯೂಬ್ ಚಾನಲ್‌ನಲ್ಲಿ ಪ್ರಸಾರಗೊಳಿಸಲಾಗಿದ್ದು ಪ್ರಶಂಸೆ ವ್ಯಕ್ತವಾಗಿದೆ.

ವಿಭಾಗದ ಸಿಬ್ಬಂದಿ ಸಂದೀಪ ಹಾಗೂ ಡಾ.ತಹಮೀನಾ ಕೊಲ್ಹಾರ ತಂಡಕ್ಕೆ ನೆರವಾಗಿದ್ದಾಗಿ ಪ್ರೊ.ಕಾಕಡೆ ಹೆಮ್ಮೆಯಿಂದ ತಿಳಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net