

ಸೋಮವಾರಪೇಟೆ: ಶಿಕ್ಷಣದ ಹಕ್ಕು ಸಿಕ್ಕ ನಂತರ ಮಹಿಳೆಯರಿಗೆ ಸಮಾನತೆ ಸಿಕ್ಕಿದೆ. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಹಕ್ಕು ಪಡೆದುಕೊಳ್ಳಲು ಮಹಿಳೆಯರು ಪರದಾಡುವಂತಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಜಲಜಾ ಶೇಖರ್ ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ತೋಳೂರು ಶೆಟ್ಟಳ್ಳಿ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ದಿ.ಪಿ.ಎಸ್.ಬೀರಪ್ಪ ದತ್ತಿನಿಧಿ ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ ವಿಷಯದಲ್ಲಿ ಉಪನ್ಯಾಸ ನೀಡಿದರು.
ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯುವ ಮೂಲಕ ತಮ್ಮ ಹಕ್ಕನ್ನು ಸ್ಥಾಪಿಸಿಕೊಳ್ಳಬೇಕು ಎಂದು ಹೇಳಿದರು. ದೇಶದಲ್ಲಿ ಹೊಸ ಶಿಕ್ಷಣ ನೀತಿ ಜಾರಿಯ ನಂತರ ಶೈಕ್ಷಣಿಕ ಕ್ಷೇತ್ರದಲ್ಲಿ ಮಹಿಳೆಯರಿಗೆ ಉಚಿತ ಶಿಕ್ಷಣ ದೊರೆಯುತ್ತಿದೆ. ಸರ್ಕಾರ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ವಿದ್ಯಾರ್ಥಿನಿಯರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ದೇಶದಲ್ಲಿ ಮಹಿಳಾ ಸ್ವಾಂತತ್ರ್ಯವನ್ನು ಕಿತ್ತುಕೊಂಡು ಮಹಿಳೆಯರು ಕತ್ತಲೆಯಲ್ಲೇ ಕಾಲ ಕಳೆಯುತ್ತಿದ್ದ ಸಂದರ್ಭ 12ನೇ ಶತಮಾನದಲ್ಲಿ ಮಹಿಳೆಯರನ್ನು ಕತ್ತಲಲ್ಲಿ ಇಟ್ಟು ಸಮಾಜ ಕಟ್ಟಲು ಸಾಧ್ಯವಿಲ್ಲ ಎಂಬುದು ಶರಣರಿಗೆ ತಿಳಿಯಿತು. ಅಂದೆ ಅನುಭವ ಮಂಟಪ ಸ್ಥಾಪಿಸಿ, ಹೆಣ್ಣು ಮಕ್ಕಳಿಗೆ ಸ್ಥಾನಮಾನಗಳನ್ನು ಕೊಡುವ ಪ್ರಯತ್ನ ಮಾಡಿದರು. 33 ವಚನಕಾರ್ತಿಯರು ಸಾಹಿತ್ಯ ಕೃಷಿ ಮಾಡಿದರು ಎಂದರು.
ಬ್ರಿಟಿಷರಿಗೆ ದೇಶದ ಮಹಿಳಾಶಕ್ತಿ ಯಾವತ್ತು ಚಿರಋಣಿಗಳಾಗಿಬೇಕು. ಬ್ರಿಟಿಷರು ಭಾರತವನ್ನು ವಶಪಡಿಸಿಕೊಂಡ ಸಂದರ್ಭ, ಭಾರತ ಹಿಂದುಳಿಯಲು ಕಾರಣವೇನೆಂದು ಉನ್ನತಮಟ್ಟದ ಸಮೀಕ್ಷೆ ನಡೆಸಿದಾಗ ಮಹಿಳಾ ಶಿಕ್ಷಣದ ಕೊರತೆಯಿಂದ ಭಾರತ ಬಡ ದೇಶವಾಗಿದೆ ಎಂಬ ವರದಿ ಕೈಸೇರಿತು. ದೇಶದಲ್ಲಿ ಮಹಿಳೆಯರಿಗೆ ಶಿಕ್ಷಣ ಕಡ್ಡಾಯ ಕಾನೂನು ತರುವ ಮೂಲಕ ಶೈಕ್ಷಣಿಕ ಕಾಂತ್ರಿಯನ್ನೇ ಆಂಗ್ಲರು ಮಾಡಿದರು. ಪ್ರಸಕ್ತ ಹತ್ತನೇ ತರಗತಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಎಂದು ಪತ್ರಿಕೆಗಳಲ್ಲಿ ಓದುತ್ತೇವೆ. ಇದಕ್ಕೆಲ್ಲ ವಿದ್ಯಾರ್ಥಿನಿಯರ ಸತತ ಪರಿಶ್ರಮವೇ ಕಾರಣ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಸಾಪ.ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ, ಶಾಂತಳ್ಳಿ ಹೋಬಳಿ ಅಧ್ಯಕ್ಷ ಸಿ.ಎಸ್.ನಾಗರಾಜು, ತಾಲೂಕು ಕಸಾಪ ಸ್ಥಾಪಕ ಅಧ್ಯಕ್ಷ ಜೆ.ಸಿ.ಶೇಖರ್, ಪದಾಧಿಕಾರಿಗಳಾದ ಜ್ಯೋತಿ ಅರುಣ್, ಕೆ.ಪಿ.ದಿನೇಶ್, ಜಗದೀಶ್, ಜಮೀರ್, ಸುರೇಶ್ ಇದ್ದರು.