

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ
ಕಳೆದ ಹತ್ತು ದಿನಗಳಿಂದ ಕುಡಿಯುವ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ವಾರ್ಡ್ ನಂ. 48 ಹಾಗೂ 50ರ ವ್ಯಾಪ್ತಿಯ ವಿದ್ಯಾನಗರ ತಿಮ್ಮಸಾಗರ ಗುಡಿ ಹಿಂಭಾಗದ ಮಹಿಳೆಯರು ಖಾಲಿ ಕೊಡ, ಕ್ಯಾನ್ ಹಿಡಿದು ನ್ಯೂ ಕೋರ್ಟ್ ಕಾಂಪ್ಲೆಕ್ಸ್ ಬಳಿ ಗುರುವಾರ ಸಂಜೆ ಕೆಲ ಕಾಲ ರಸ್ತೆ ಸಂಚಾರ ತಡೆ ನಡೆಸಿದರು.
ಈ ಭಾಗದಲ್ಲಿ ಪ್ರತಿ 5-6 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದ್ದವು. ಆದರೆ, ಈ ಬಾರಿ ಕಳೆದ 10 ದಿನಗಳಿಂದ ನೀರು ಪೂರೈಕೆಯಾಗದ ಹಿನ್ನೆಲೆಯಲ್ಲಿ ನಿವಾಸಿಗಳು ಪ್ರತಿಭಟನೆ ನಡೆಸಿದರು. ಹು-ಧಾ ಮಹಾನಗರ ಪಾಲಿಕೆ, ಪಾಲಿಕೆ ಸದಸ್ಯರು, ಸ್ಥಳೀಯ ಶಾಸಕರ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವಾರ್ಡ್ಗಳ ನಿವಾಸಿಗಳಿಂದ ಪಾಲಿಕೆಗೆ ಗರಿಷ್ಠ ಪ್ರಮಾಣದಲ್ಲಿ ತೆರಿಗೆ ಪಾವತಿಯಾಗುತ್ತದೆ. ಕನಿಷ್ಠ ನಿಯಮಿತವಾಗಿ ನೀರು ಪೂರೈಕೆ ಮಾಡದಿದ್ದರೆ ಹೇಗೆ? 5-6 ದಿನ ಕಳೆದು ಕಳೆದ 2-3 ದಿನಗಳಿಂದ ಕರೆ ಮಾಡಿದರೂ ಪಾಲಿಕೆಯವರು ಸ್ಪಂದಿಸಿಲ್ಲ. ಹೀಗೆ ಮುಂದುವರಿದರೆ ಮೇ 7ರಂದು ಮತದಾನ ಬಹಿಷ್ಕಾರಕ್ಕೂ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಡಾ. ಎಂ.ಸಿ. ಸಿಂಧೂರ, ದೀಪಾ ಸಿಂಧೂರ, ಆಶಾ ಹುಬ್ಬಳ್ಳಿಕರ, ಸುಜಾತಾ ಸಂಶಿ, ಶ್ವೇತಾ ದುಂದೂರ, ಸವಿತಾ ನಾಯಕ, ಮುಕ್ತಾ ನವಲೆ, ಇತರರು ಇದ್ದರು.