ಸಮಾಜಕ್ಕೆ ಮಹಿಳೆಯರ ಸೇವೆ ಅನನ್ಯ

13 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದಲ್ಲಿ ಮಹಿಳೆಯರ ಸೇವೆ ಅನನ್ಯವಾಗಿದ್ದು, ಪ್ರೀತಿ, ಒಗ್ಗಟ್ಟೇ ಮಹಿಳೆಯರ ಶಕ್ತಿ ಎಂದು ಕರ್ನಾಟಕ ಚಲನಚಿತ್ರೋದ್ಯಮ ಕ್ಷೇಮಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಡಾ. ಕಲ್ಮೇಶ ಹಾವೇರಿಪೇಟ್ ಹೇಳಿದರು.
ನಗರದ ಮುರುಘಾಮಠ ಬಳಿಯ ಮಟ್ಟಿ ಪ್ಲಾಟ್‌ನಲ್ಲಿ ಸೋಮವಾರ ಆಯೋಜಿಸಿದ್ದ ದೀಪಾವಳಿ ಉತ್ಸವ ಹಾಗೂ ಸರಸ್ವತಿ ಜ್ಞಾನ ಮಹಿಳಾ ಮಂಡಳ ಉದ್ಘಾಟಿಸಿ ಅವರು ಮಾತನಾಡಿದರು.
ತೊಟ್ಟಿಲು ತೂಗುವ ಕೈ ಜಗತ್ತೇ ತೂಗಬಹುದು. ಈಗಂತೂ ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರು ತೊಡಗಿಕೊಂಡು ಸೈ ಎನಿಸಿಕೊಂಡಿದ್ದಾರೆ. ಜೀವನದಲ್ಲಿ ಸಾಧಿಸಬೇಕಾದರೆ ಕಷ್ಟಪಡಲೇಬೇಕು. ಬದುಕಿನಲ್ಲಿ ಬರುವ ಕಷ್ಟಗಳನ್ನು ಸವಾಲಾಗಿ ಸ್ವೀಕರಿಸುವ ಮೂಲಕ ಮಹಿಳೆಯರು ಒಗ್ಗಟ್ಟಿನಿಂದ ಪರಸ್ಪರ ಏಳ್ಗೆಗೆ ಕೈ ಜೋಡಿಸಬೇಕು. ಮಹಿಳೆಯರ ಏಳ್ಗೆಗಾಗಿ ಅಸ್ತಿತ್ವಕ್ಕೆ ಬಂದಿರುವ ಮಹಿಳಾ ಮಂಡಳಕ್ಕೆ ಬೇಕಾದ ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಪ್ರಭು ಹಂಚಿನಾಳ ಮಾನಾಡಿ, ಮಹಿಳೆಯರ ಒಗ್ಗಟ್ಟಿನಲ್ಲೇ ಬಲವಿದೆ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ಸತ್ಯ ಅರಿತು ಮಹಿಳೆಯರ ಉನ್ನತಿಗೆ ಮಹಿಳಾ ಮಂಡಳ ಅಸ್ತಿತ್ವಕ್ಕೆ ಬಂದಿರುವುದು ಖುಷಿ ಕೊಟ್ಟಿದೆ. ಮಹಿಳೆಯರು ಬರೀ ಅಡುಗೆ ಮನೆಗಷ್ಟೇ ಸೀಮಿತಗೊಳ್ಳದೆ ಸಮಾಜದ ಉನ್ನತಿಗೆ ಕೊಡುಗೆ ನೀಡಬೇಕು ಎಂದರು.
ಶರಣಪ್ಪ ಮಡಿವಾಳರ, ರಮೇಶ ಜಟ್ಟೆನ್ನವರ ಮಾತನಾಡಿದರು. ದೀಪಾವಳಿ ಹಬ್ಬದ ಪ್ರಯುಕ್ತ ಮಹಿಳೆಯರು ಹಾಗೂ ಮಕ್ಕಳಿಗೆ ಏರ್ಪಡಿಸಿದ್ದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸುನಂದಾ ಹಿರೇಮಠ, ಶಿವಗಂಗವ್ವ ಬುದ್ನಿ, ಕಸ್ತೂರಿ ಮಲ್ಲಿಗವಾಡ, ವಿಜಯಲಕ್ಷ್ಮೀ ಕುದರಿ, ವಿದ್ಯಾ ಮಟ್ಟಿ, ಸದಸ್ಯರು, ಇತರರು ಇದ್ದರು.
ದೀಪಾ ಬುದ್ನಿ ಸ್ವಾಗತಿಸಿದರು. ಸರೋಜಾ ಮಡಿವಾಳರ ನಿರೂಪಿಸಿದರು. ಸಹನಾ ದಂಡಿದಾಸ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net