ನೀರು ಸಂರಕ್ಷಣೆಯಲ್ಲಿ ಮಹಿಳೆ ಪಾತ್ರ ಮುಖ್ಯ

Women's role is important in water conservation
ವಿಜಯಪುರದ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಹಮ್ಮಿಕೊಂಡಿದ್ದ ಜಲ ಸಖಿ-ಮಹಿಳಾ ಜಲ ಜಾಗೃತಿ ಕಾರ್ಯಗಾರವನ್ನು ಗಣ್ಯರು ಉದ್ಘಾಟಿಸಿದರು. ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ, ಪದ್ಮಜಾ ಎಂ.ಎನ್., ಮಲ್ಲಮ್ಮ ಯಾಳವಾರ ಮತ್ತಿತರರಿದ್ದಾರೆ.
Published on

ವಿಜಯಪುರ: ಜಲಮೂಲಗಳ ರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ನೀರು ಸಂರಕ್ಷಣೆಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯ ಎಂದು ಮಹಿಳಾ ವಿವಿಯ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಹೇಳಿದರು.

ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನ ಕೇಂದ್ರ ಮತ್ತು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ ಹಾಗೂ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜ್ ಸಹಯೋಗದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಲ ಸಖಿ-ಮಹಿಳಾ ಜಲ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಮುಂಬರುವ ದಿನಗಳಲ್ಲಿ ನೀರಿನ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದು ಸಲಹೆ ನೀಡಿದರು.

ಮಹಿಳೆಯರು ನೀರಿನ ಪಾರಂಪರಿಕ ಬಳಕೆದಾರರು. ನೀರು ಸಂರಕ್ಷಣೆಯಲ್ಲಿ ಮಹಿಳೆಯ ಪಾತ್ರ ಬಹುಮುಖ್ಯ. ನೀರಿನ ಮಹತ್ವ ಕುರಿತು ಅವರಿಗೆ ಸಾಕಷ್ಟು ಜ್ಞಾನವಿದೆ. ಮುಂದೊಂದು ದಿನ ನೀರಿಗಾಗಿಯೇ ಹೋರಾಟಗಳು ನಡೆಯುವ ಸಾಧ್ಯತೆಗಳಿವೆ. ಹೀಗಾಗಿ, ಸ್ಥಳೀಯ, ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀರಿನ ಸದ್ಬಳಕೆ ಮತ್ತು ಸಂರಕ್ಷಣೆ ಕುರಿತು ಚರ್ಚೆಗಳು ನಡೆಯಬೇಕು ಎಂದು ಹೇಳಿದರು.

ಸಬಲಾ ಸಂಸ್ಥೆ ಸಿಇಒ, ಸಿಂಡಿಕೇಟ್ ಸದಸ್ಯೆ ಮಲ್ಲಮ್ಮ ಯಾಳವಾರ ಮಾತನಾಡಿ, ನಮ್ಮ ಜೀವನದ ಶೈಲಿ ಬದಲಾಗುತ್ತಿದೆ. ಜತೆಗೆ ನೀರಿನ ಬಳಕೆ ಕೂಡ ಹೆಚ್ಚಾಗುತ್ತಿದೆ. ಅದು ನಿಲ್ಲಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಧಾರವಾಡದ ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ, ಬಿಎಲ್‌ಡಿಇ ಕಾಲೇಜ್ ಆಫ್ ಇಂಜನಿಯರಿಂಗ್ ಮತ್ತು ಟೆಕ್ನಾಲಜಿ ನಿರ್ದೇಶಕ ಡಾ. ವಿ.ಜಿ. ಸಂಗಮ ಮಾತನಾಡಿದರು.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯೆ ಪಾರ್ವತಿ ಕುರ್ಲೆ, ಸಣ್ಣ ನೀರಾವರಿ ವಲಯದ ಅಧೀಕ್ಷಕ ಅಭಿಯಂತರ ಪದ್ಮಜಾ ಎಂ.ಎನ್., ಮಹಿಳಾ ಅಧ್ಯಯನ ಕೇಂದ್ರದ ಮುಖ್ಯಸ್ಥೆ ಲಕ್ಷ್ಮೀದೇವಿ ಯಲ್ಲಪ್ಪ, ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಿಇಒ ಡಾ. ಬಾಬು ಸಜ್ಜನ, ಅಧೀಕ್ಷಕ ಅಭಿಯಂತರ ಕಚೇರಿ ತಾಂತ್ರಿಕ ಸಹಾಯಕಿ ಮಹೇಶ್ವರಿ ಪಾಟೀಲ, ಡಾ. ಭಾಗ್ಯಶ್ರೀ ದೊಡಮನಿ, ಡಾ. ಸರೋಜಾ ಸಂತಿ, ಡಾ. ಶಶಿಕಲಾ ರಾಠೋಡ ಮತ್ತಿತರಿದ್ದರು.

ಪ್ರಾಧ್ಯಾಪಕಿ ಸುವರ್ಣ ದೊಡಮನಿ ಪ್ರಾಸ್ತಾವಿಕ ಮಾತನಾಡಿದರು. ಇಂದುಧರ ಹಿರೇಮಠ ಪರಿಚಯಿಸಿದರು. ಅನುರಾಧಾ ಮಳಗಿ ನಿರೂಪಿಸಿದರು. ಫಕಿರೇಶ ಅಗಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net