

ಉಡುಪಿ : ಕೌಟುಂಬಿಕ ದೌರ್ಜನ್ಯದಿಂದ ನೊಂದ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸ್ವಧಾರ ಕೇಂದ್ರ ಹಾಗೂ ಅನುಪಾಲನ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
ಜಿಲ್ಲೆಯಿಂದ 2022-23ನೇ ಸಾಲಿನಲ್ಲಿ ಆಯೋಗಕ್ಕೆ ಒಟ್ಟು 26 ದೂರುಗಳು ಸಲ್ಲಿಕೆಯಾಗಿದ್ದು, 23 ಪ್ರಕರಣ ಇತ್ಯರ್ಥಗೊಂಡಿದೆ. 3 ಪ್ರಕರಣ ವಿಚಾರಣೆ ಹಂತದಲ್ಲಿದೆ. ಜಿಲ್ಲೆಯಲ್ಲಿ ಈವರೆಗೆ 1905 ಮಂದಿ ರಕ್ಷಣೆಗಾಗಿ ಹಾಗೂ 1494 ಮಂದಿ ಕೌಟುಂಬಿಕ ದೌರ್ಜನ್ಯ ದೂರು ದಾಖಲಿಸಿದ್ದಾರೆ. ಆಯೋಗವು ಕಳೆದ 3 ವರ್ಷದಲ್ಲಿ 6728 ದೂರುಗಳನ್ನು ಸ್ವೀಕರಿಸಿದ್ದು, 4120 ದೂರುಗಳನ್ನು ಇತ್ಯರ್ಥಗೊಳಿಸಲಾಗಿದೆ. ಕೋವಿಡ್ 2ನೇ ಅಲೆ ಸಂದರ್ಭದಲ್ಲಿ 21 ಗರ್ಭಿಣಿಯರು ಆಯೋಗವನ್ನು ಸಂಪರ್ಕಿಸಿದ್ದು, ಕ್ಲಪ್ತ ಸಮಯದಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಲವ್ ಅಫೇರ್‌ನಿಂದ ವಂಚನೆ, ಸೈಬರ್ ಕ್ರೈಂ, ಹೆಣ್ಮಕ್ಕಳ ನಾಪತ್ತೆ ಪ್ರಕರಣಗಳ ಬಗ್ಗೆ ಮಾಹಿತಿ ಒದಗಿಸುವಂತೆ ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಐಜಿಗೆ ಪತ್ರ ಬರೆಯಲಾಗಿದೆ. ಹದಿಹರೆಯದ ಮಕ್ಕಳು ದಾರಿ ತಪ್ಪದಂತೆ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ನಿಗಾವಹಿಸಬೇಕು. ಎಲ್ಲಾ ಉದ್ಯಮಗಳು , ಸಂಸ್ಥೆಗಳು, ಸರ್ಕಾರಿ ಇಲಾಖೆಗಳು ಆಂತರಿಕ ದೂರು ಸಮಿತಿಗಳನ್ನು ರಚಿಸಬೇಕು ಎಂದರು.
ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ, ಜಿ.ಪಂ.ಸಿಇಓ ಪ್ರಸನ್ನ ಕುಮಾರ್, ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಉಪಸ್ಥಿತರಿದ್ದರು.