ಆರೋಗ್ಯಕರ ಸಮಾಜಕ್ಕೆ ಮಹಿಳೆಯ ಜವಾಬ್ದಾರಿ ಗುರುತರ

27 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯ ಜವಾಬ್ದಾರಿ ಗುರುತರವಾಗಿದೆ. ಇಂದಿನ ದಿನಮಾನಗಳಲ್ಲಂತೂ ಅದು ಇಮ್ಮಡಿಸಿದೆ ಎಂದು ಸಮಾಜ ಸೇವಕಿ ಮೃಣಾಲ ಜೋಶಿ ಅಭಿಪ್ರಾಯಪಟ್ಟರು.

ನಗರದ ಸಾಧನಕೇರಿಯ ದ.ರಾ. ಬೇಂದ್ರೆ ಭವನದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ಏರ್ಪಡಿಸಿದ್ದ ಡಾ. ಸರೋಜಿನಿ ಶಿಂತ್ರಿ ಹಾಗೂ ಡಾ. ಪದ್ಮಾ ಅಂಗಡಿ ದತ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆ ವಿಚಲಿತಳಾಗದೆ ತನ್ನ ಶಕ್ತಿಯನ್ನಳೆದು, ತನ್ನ ಗುಣಗಳ ನೆನೆದು ತನ್ನ ಅಂತಃ ಶಕ್ತಿಯ ಬಲದಿಂದಲೇ ಸುತ್ತಲಿನ ಪರಿಸರ ತಿದ್ದುತ್ತಾ ಮುನ್ನಡೆಯಬೇಕಿದೆ ಎಂದರು.

ಕೆ.ಎಸ್​.ಪವಿತ್ರ ಮಾತನಾಡಿ, ಆನಂದಕ್ಕೆ ಆರೋಗ್ಯವೇ ಸೋಪಾನ ಎಂಬುದನ್ನು ನೃತ್ಯ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ರಾಮಾಯಣ ದರ್ಶನಂ ಕಾವ್ಯದ ಜತೆಗೆ ಅನೇಕ ಆಧುನಿಕ ಕವನಗಳ ಆಧಾರಿತ ರೂಪಕಗಳನ್ನು ಅಭಿನಯಿಸಿದರು.

ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಧ್ಯಕ್ಷತೆ ವಹಿಸಿದ್ದರು. ಮೇಘಾ ಹುಕ್ಕೇರಿ, ಸುನಿತಾ, ಉಷಾ ಗದ್ದಗಿಮಠ, ಇತರರು ಇದ್ದರು. ಪ್ರಜ್ಞಾ ಮತ್ತಿಹಳ್ಳಿ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net