ಟಿಪ್ಪರ್ ಹಾವಳಿ ಖಂಡಿಸಿ ಮಹಿಳೆಯರ ಪ್ರತಿಭಟನೆ

20 SRT PROTES
ಮಾಗಡಿ ಗ್ರಾಮದಲ್ಲಿ ನಿತ್ಯ ನೂರಾರು ಖಡಿ ತುಂಬಿದ ಟಿಪ್ಪರ್‌ಗಳ ಓಡಾಟದಿಂದ ದಾರಿಕಾಣದಾಗಿದೆ ಎಂದು ಬೇಸತ್ತ ಮಹಿಳೆಯರು ಅವುಗಳನ್ನು ತಡೆದು ಕೆಲ ಕಾಲ ಪ್ರತಿಭಟನೆ ನಡೆಸಿದರು
Published on

ಶಿರಹಟ್ಟಿ: ತಾಲೂಕಿನ ಮಾಗಡಿ ಗ್ರಾಮದಲ್ಲಿ ನಿತ್ಯ ನೂರಾರು ಖಡಿ ತುಂಬಿದ ಟಿಪ್ಪರ್‌ಗಳ ಓಡಾಟದ ಹಾವಳಿಗೆ ಬೇಸತ್ತ ಮಹಿಳೆಯರು ಸೋಮವಾರ ಸಂಜೆ ಅವುಗಳನ್ನು ತಡೆದು ಕೆಲ ಪ್ರತಿಭಟನೆಗೆ ಮುಂದಾದ ಪ್ರಸಂಗ ನಡೆದಿದೆ.

ಈ ವೇಳೆ ಗ್ರಾಮದ ಚೆನ್ನಮ್ಮ ಹೋರಿ, ರೇಶ್ಮಾ ನದಾಫ ಮಾತನಾಡಿ, ಚೆನ್ನಪಟ್ಟಣ ರಸ್ತೆ ಮೂಲಕ ಗ್ರಾಮದ ಹೊರವಲಯದಿಂದ ನಿತ್ಯ ನೂರಾರು ಟಿಪ್ಪರ್‌ಗಳ ಓಡಾಟದಿಂದ ಮಕ್ಕಳು ಮರಿ ಕಟ್ಟಿಕೊಂಡು ಬದುಕುತ್ತಿರುವ ನಾವು ಜೀವಭಯದಲ್ಲಿ ಕಾಲ ಕಳೆಯುವಂತಾಗಿದೆ. ಎಂದೂ ದೂರಿದರು.

ಇದೇ ರಸ್ತೆಯಲ್ಲಿ 3 ಅಂಗನವಾಡಿ ಕೇಂದ್ರಗಳಿದ್ದು, ಇಕ್ಕಟ್ಟಾದ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ಟಿಪ್ಪರ್‌ಗಳಿಂದ ಅನಾಹುತ ಸಂಭವಿಸುವ ಸಾಧ್ಯತೆಯಿದೆ. ಅಲ್ಲದೇ ಟಿಪ್ಪರ್‌ಗಳ ಓಡಾಟದಿಂದ ಉದ್ಭವಿಸುವ ಧೂಳಿನಿಂದ ಮಕ್ಕಳಿಗೆ ಅಲರ್ಜಿವುಂಟಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುವಂತಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಬಡವರ ಕೋಪ ದವಡೆಗೆ ಮೂಲ ಎಂಬಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆದ್ದರಿಂದ ಬೇರೆ ದಾರಿಕಾಣದೇ ಟಿಪ್ಪರ್‌ಗಳನ್ನು ತಡೆದು ಪತ್ರಿಕಾ ವರದಿಗಳ ಮೂಲಕ ಅಧಿಕಾರಿಗಳ ಗಮನ ಸೆಳೆಯಲು ಮುಂದಾಗಬೇಕಾಯಿತೆಂದರು.

ಸ್ಥಳಕ್ಕಾಗಮಿಸಿದ ಪಿಡಿಒ, ಲಿಖಿತವಾಗಿ ಮನವಿ ನೀಡಿ ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿ ಪ್ರತಿಭಟನೆ ಹಿಂಪಡೆಯಲು ಕೋರಿದರು. ಸಧ್ಯ ತಮ್ಮ ಮಾತಿಗೆ ಸಹಮತ ನೀಡಿ ಬಿಡುತ್ತೇವೆ. ಆದರೆ ಟಿಪ್ಪರ್‌ಗಳ ಓಡಾಟ ನಿಯಂತ್ರಿಸದಿದ್ದರೆ ಮತ್ತೆ ಹೋರಾಟ ನಡೆಸುವದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net