

ಮೈಸೂರು: ಸಂಘಟನೆ ಮೂಲಕ ಶಕ್ತಿ ಎನ್ನುವ ಧ್ಯೇಯದಿಂದ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಸ್ಥಾಪನೆಗೊಂಡ ‘ಸ್ತ್ರೀಶಕ್ತಿ ಸ್ವ ಸಹಾಯ ಸಂಘ’ಗಳಿಗೆ ಈಗ ಮತ್ತಷ್ಟು ಆರ್ಥಿಕ ಬಲಬಂದಂತಾಗಿದೆ.
ನಗರದ ಎಲ್ಲ ಬಡಾವಣೆಗಳಲ್ಲಿಯೂ ಇರುವ ಸ್ತ್ರೀಶಕ್ತಿ ಸಂಘಗಳನ್ನು ತೆರಿಗೆ ಸಂಗ್ರಹದಲ್ಲಿ ಬಳಸಿಕೊಳ್ಳುವ ಮೂಲಕ ಸಂಘಗಳಿಗೂ ಆರ್ಥಿಕ ಶಕ್ತಿ ಜತೆಗೆ ನಗರಪಾಲಿಕೆಗೂ ಕಂದಾಯ ವಸೂಲಿಗೆ ದಾರಿ ಸುಗಮವಾದಂತಾಗಿದೆ.
ಹೀಗಾಗಿ ಈಗ ನಗರದಲ್ಲಿ ತೆರಿಗೆ ಸಂಗ್ರಹಿಸಲು ಮುಂದೆ ಬಂದ ಸಂಘಗಳನ್ನು ಅಂತಿಮಗೊಳಿಸಿದ್ದು, 8 ಸಂಘಟನೆಗಳಿಗೆ ನೀರು, ಆಸ್ತಿ ತೆರಿಗೆ ವಸೂಲಿ ಹೊಣೆಗಾರಿಕೆ ನೀಡಿದ್ದರೆ, 6 ಸಂಘಟನೆಗಳಿಗೆ ಉದ್ಯಾನ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ.
ತೆರಿಗೆ ವಸೂಲಿಯನ್ನು ಎರಡು ವಿಭಾಗ ಮಾಡಿ ಹಂಚಿಕೆ ಮಾಡಲಾಗಿದೆ. ನಗರಪಾಲಿಕೆಯ 65 ವಾರ್ಡ್‌ಗಳಲ್ಲಿ ನೀರಿನ ಶುಲ್ಕವನ್ನು ಐದು ಸಂಘಗಳು ಸಂಗ್ರಹಿಸಿದರೆ, ಇನ್ನು ಮೂರು ಸಂಘಗಳು ಆಸ್ತಿ ತೆರಿಗೆ ವಸೂಲಿ ಜವಾಬ್ದಾರಿ ವಹಿಸಲಾಗಿದೆ.
ಹೀಗಾಗಿ ಇನ್ನು ಮುಂದೆ ನಗರದಲ್ಲಿ ನೀರಿನ ಕರ ಮತ್ತು ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ನಾಗರಿಕರ ಮನೆ ಬಾಗಿಲಿಗೆ ಮಹಿಳೆಯರು ತೆರಳಿ ಸಂಗ್ರಹಿಸಲಿದ್ದಾರೆ. ಗ್ರಾಹಕರು ಬಾಕಿ ಉಳಿಸಿಕೊಂಡಿರುವ ಶುಲ್ಕದ ಬಗ್ಗೆ ಮಾಹಿತಿ ನೀಡಿ, ವಸೂಲಿ ಕಾರ್ಯವನ್ನು ಸೀ ಶಕ್ತಿ ಸಂಘಟನೆಗಳ ಸದಸ್ಯರು ಮುಂದಾಗಲಿದ್ದಾರೆ.
ಗುರಿ ಸಾಧನೆಯ ನಿರೀಕ್ಷೆ: ನಗರಪಾಲಿಕೆಯು ಪ್ರತಿ ವರ್ಷ ಆಸ್ತಿ ತೆರಿಗೆ ಸಂಗ್ರಹ ಮಾಡಲು ಇನ್ನಿಲ್ಲದ ಸರ್ಕಸ್ ನಡೆಸಿದರೂ ನಿರೀಕ್ಷಿತ ಗುರಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಜನರಿ ತೆರಿಗೆ ಪಾವತಿಸಲು ಕಚೇರಿಗೆ ಬಾರದೆ ಆನ್‌ಲೈನ್ ಮೂಲಕ ತೆರಿಗೆ ಪಾವತಿಗೆ ವ್ಯವಸ್ಥೆ ಮಾಡಿದ್ದರೂ ಜನರು ಸ್ಪಂದಿಸುತ್ತಿರಲಿಲ್ಲ.
ಹೀಗಾಗಿ ಮನೆ ಮನೆಯಿಂದ ತೆರಳಿ ತೆರಿಗೆ ವಸೂಲಿಗೆ ಮಹಿಳಾ ಸ್ವಸಹಾಯ ಸಂಘಗಳ ನೆರವನ್ನು ಪಡೆಯಲು ನಿರ್ಧರಿಸಲಾಗಿದೆ. ಜತೆಗೆ ನೀರಿನ ತೆರಿಗೆ ಬೆಟ್ಟದಷ್ಟು ಬೆಳೆದಿದ್ದು, ಅದನ್ನು ವಸೂಲಿ ಮಾಡುವ ಜವಾಬ್ದಾರಿ ನೀಡಿರುವುದರಿಂದ ತೆರಿಗೆ ಸಂಗ್ರಹಣೆ ಈ ಬಾರಿ ಗುರಿ ಸಾಧನೆ ಆಗಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.
ಮನೆ, ಮನೆಗೆ ಭೇಟಿ ನೀಡಿ ಕರ ಬಾಕಿ ಎಷ್ಟಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ಕಲೆಹಾಕಿ, ಸಕಾಲದಲ್ಲಿ ಗ್ರಾಹಕರಿಂದ ಹಣ ವಸೂಲಿ ಮಾಡಿ ಪಾಲಿಕೆಗೆ ನೀಡಲಿದೆ. ಅಮೃತ್ 2.0 ಯೋಜನೆಯಡಿ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ಸಮರ್ಪಕ ವಸೂಲಿಗೆ ಡೇ-ನಲ್ಮ್ ಯೋಜನೆಯಡಿ ರಚಿಸಲಾದ ಮಹಿಳಾ ಸ್ವಸಹಾಯ ಗುಂಪುಗಳು ಅರ್ಹವಾಗಿವೆ.
ಸಂಘಗಳಿಗೆ ಶೇ.5ರಷ್ಟು ಕಮಿಷನ್
ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕ ವಸೂಲಿ ಮಾಡಿಕೊಡುವ ಸಂಘಟನೆಗಳಿಗೆ ಪಾಲಿಕೆ ಶೇ.5ರಷ್ಟು ಕಮಿಷನ್ ನೀಡಲಿದೆ. ಗ್ರಾಹಕರು ಹಣವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಲು ಅವಕಾಶವಿದ್ದು, ಸಂಘಟನೆಯ ಸದಸ್ಯರು ನೆರವಾಗಲಿದ್ದಾರೆ. ಪಾಲಿಕೆಯ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಯಾಗುವಂತೆ ಮಾಡಲಿದ್ದಾರೆ. ನಗದು ವ್ಯವಹಾರಕ್ಕೆ ಅವಕಾಶ ಕಲ್ಪಿಸದೆ ಪಾರದರ್ಶಕತೆಗೆ ಆದ್ಯತೆ ನೀಡಲಾಗಿದೆ. ಆಸ್ತಿ ತೆರಿಗೆ ವಸೂಲಿ ಮಾಡುವ ಅವಕಾಶ ಸಿಕ್ಕಿರುವುದು ಸಂಘಟನೆಗೆ ಪರ್ಯಾಯ ಆದಾಯದ ಮೂಲವಾಗಿದೆ. ಇದರಿಂದ ಸಂಘದ ಸದಸ್ಯರಿಗೆ ಅನುಕೂಲವಾಗಲಿದೆ.
ಯಾವ ಸಂಘಟನೆಗಳಿಗೆ ಜವಾಬ್ದಾರಿ?
ನಗರದ ನೀರಿನ ಶುಲ್ಕ ವಸೂಲಿ ಜವಾಬ್ದಾರಿಯನ್ನು ಆಲನಹಳ್ಳಿಯ ಚಾಮುಂಡೇಶ್ವರಿ, ವಿದ್ಯಾರಣ್ಯಪುರಂನ ದಾನೇಶ್ವರಿ, ಸರಸ್ವತಿಪುರಂನ ಶರಥಿ, ಜನತಾ ಬಡಾವಣೆಯ ಅಂಗಾಳಪರಮೇಶ್ವರಿ, ಅಗ್ರಹಾರದ ಅರೋರ ಮಹಿಳಾ ಸ್ವಸಹಾಯ ಸಂಘಗಳಿಗೆ ನೀಡಲಾಗಿದೆ.
ಅಲ್ಲದೇ ಆಸ್ತಿ ತೆರಿಗೆ ವಸೂಲಿಗೆ ಹೊಣೆಗಾರಿಕೆಯನ್ನು ಅಜೀಜ್ ಸೇಠ್‌ನಗರದ ಸ್ಫೂರ್ತಿ, ರಾಜೀವ ನಗರದ ಸಂಜೀವಿನಿ, ಕುವೆಂಪುನಗರದ ಮಲ್ಲಿಗೆ ಸಂಘಟನೆಗಳಿಗೆ ವಹಿಸಲಾಗಿದೆ.
ಉದ್ಯಾನ ನಿರ್ವಹಣೆ ಮಹಿಳಾ ಸಂಘಗಳಿಗೆ:
ಇಷ್ಟು ವರ್ಷಗಳ ಕಾಲ ಗುತ್ತಿಗೆದಾರರಿಗೆ ಉದ್ಯಾನ ನಿರ್ವಹಣೆ ನೀಡುತ್ತಿದ್ದ ನಗರಪಾಲಿಕೆ ಈಗ ಪ್ರಾಯೋಗಿಕವಾಗಿ ಮಹಿಳಾ ಸಂಘಗಳಿಗೆ ನಿರ್ವಹಣೆ ಜವಾಬ್ದಾರಿ ನೀಡಲಾಗಿದೆ. ಇದಕ್ಕಾಗಿ ಅನ್ನಪೂರ್ಣೇಶ್ವರಿ, ಲಕ್ಷ್ಮಿಸರಸ್ವತಿ, ಸಮ್ಮತಿ, ಯಾ ಹಬೀಬ್, ಗುಲ್ಷನ್ ಮತ್ತು ನೂರ್ ಸೀ ಶಕ್ತಿ ಮಹಿಳಾ ಸ್ವ ಸಹಾಯ ಸಂಘಗಳನ್ನು ಆಯ್ಕೆ ಮಾಡಲಾಗಿದೆ. ಈ ಸಂಘಟನೆಗಳಿಗೆ ವಾರ್ಷಿಕ 2 ರಿಂದ 10 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ. ಇದರಿಂದ ಪಾಲಿಕೆಗೆ ಗುತ್ತಿಗೆಗೆ ನೀಡುತ್ತಿದ್ದ ಹಣದಲ್ಲಿ ಉಳಿಕೆಯಾದರೆ, ಸತ್ತ್ತ್ರಿ ಶಕ್ತಿ ಸಂಘಟನೆಗಳಿಗೆ ಇದು ಆದಾಯದ ಮೂಲವಾಗುತ್ತದೆ.
ತೆರಿಗೆ ಹೆಚ್ಚು ಸಂಗ್ರಹ ನಿರೀಕ್ಷೆ
ನಗರಪಾಲಿಕೆಗೆ ನೀರು, ಆಸ್ತಿ ತೆರಿಗೆ ಸಂಗ್ರಹಣೆ ಜವಾಬ್ದಾರಿಯನ್ನು ಆಯ್ದ ಸ್ತ್ರೀಶಕ್ತಿ ಸ್ವಸಹಾಯ ಸಂಘಟನೆಗಳಿಗೆ ನೀಡಲಾಗಿದೆ. ತೆರಿಗೆ ಸಂಗ್ರಹಣ ಕುರಿತು ಈಗಾಗಲೇ ಸೂಕ್ತ ತರಬೇತಿ ನೀಡಲಾಗಿದ್ದು, ಆನ್‌ಲೈನ್‌ನಲ್ಲಿ ಹೇಗೆ ತುಂಬುವುದು ಎನ್ನುವುದು ತಿಳಿಸಿಕೊಡಲಾಗಿದೆ. ಇದರಿಂದ ಸಂಘಟನೆಗಳಿಗೆ ಆರ್ಥಿಕ ಶಕ್ತಿ ದೊರೆಯುವುದು ಒಂದೆಡೆಯಾದರೆ, ಪಾಲಿಕೆಗೆ ಹೆಚ್ಚು ತೆರಿಗೆ ಸಂಗ್ರಹಣೆಯಾಗುವ ನಿರೀಕ್ಷೆ ಇದೆ. ಶೀಘ್ರದಲ್ಲೇ ತೆರಿಗೆ ಸಂಗ್ರಹಣೆ ಕಾರ್ಯ ಆರಂಭವಾಗಲಿದೆ.
ಸೋಮಶೇಖರ್ ಜಿಗಣಿ
ಉಪ ಆಯುಕ್ತ (ಕಂದಾಯ), ನಗರಪಾಲಿಕೆ